

ಹಾವೇರಿ: ಜಿಲ್ಲೆಯಲ್ಲಿ ಗರ್ಭಿಣಿ, ಆಶಾ ಕಾರ್ಯಕರ್ತೆ ಸೇರಿ ಭಾನುವಾರ ಮೂವರು ಮಹಿಳೆಯರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 41 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 21 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ 20 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿಯ 45 ವರ್ಷದ ಮಹಿಳೆಗೆ, ಸವಣೂರ ಪಟ್ಟಣದ 23 ವರ್ಷದ ಗರ್ಭಿಣಿಗೆ, ಸವಣೂರ ತಾಲೂಕು ಕಾರಡಗಿಯ 38 ವರ್ಷದ ಆಶಾ ಕಾರ್ಯಕರ್ತೆಗೆ ಶನಿವಾರ ಸೋಂಕು ದೃಢಪಟ್ಟಿದೆ.
ಟ್ರಾವೆಲ್ ಹಿಸ್ಟರಿ: ಶಿಗ್ಗಾಂವಿಯ 45 ವರ್ಷದ ಮಹಿಳೆ ಪತಿ ಹಾಗೂ ಮಕ್ಕಳೊಂದಿಗೆ ದೇಸಾಯಿಗಲ್ಲಿ ವಾಸವಾಗಿದ್ದಳು. ಇದನ್ನು ಈಗಾಗಲೇ ಕಂಟೇನ್ಮೆಂಟ್ ಎಂದು ಘೊಷಿಸಿದ್ದರಿಂದ ಸಂಚಾರ ಮಾಡಿಲ್ಲ. ಜೂ. 17ರಂದು ಸ್ವ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. 21ರಂದು ಪಾಸಿಟಿವ್ ವರದಿ ಬಂದಿದೆ.
ಸವಣೂರನ ಖಾದರಬಾಗ್ ಓಣಿಯ 23 ವರ್ಷದ ಗರ್ಭಿಣಿ ಸವಣೂರನಲ್ಲಿ ವಾಸವಾಗಿದ್ದು, ವಿಪರೀತ ಜ್ವರ ಕಾರಣ ಜೂ. 19ರಂದು ಸ್ವ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. 21ರಂದು ಪಾಸಿಟಿವ್ ಬಂದಿದೆ. ಈಕೆ ಸವಣೂರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ಅವರ ಬಳಿ ಜೂ. 18ರಂದು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಳು. ಹೀಗಾಗಿ ವೈದ್ಯರಿಗೂ ಸೋಂಕು ಹರಡಿರುವ ಸಾಧ್ಯತೆ ದಟ್ಟವಾಗಿದೆ.
ಕಾರಡಗಿಯ 23 ವರ್ಷದ ಮಹಿಳೆ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪತಿಯೊಂದಿಗೆ ಸವಣೂರು ತಾಲೂಕು ಕಾರಡಗಿ ಗ್ರಾಮದಲ್ಲಿ ವಾಸವಾಗಿದ್ದಳು. ಆಶಾ ಕಾರ್ಯಕರ್ತೆಯರ ನಿಯಮಿತ ತಪಾಸಣೆ ಸಮಯದಲ್ಲಿ ಜೂ. 19ರಂದು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ. 21ರಂದು ಪಾಸಿಟಿವ್ ವರದಿ ಬಂದಿದೆ. ಆಶಾ ಕಾರ್ಯಕರ್ತೆಯ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ. ಭಾನುವಾರ ಸೋಂಕು ದೃಢಪಟ್ಟ ಮೂವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.