

ಬಾಗಲಕೋಟೆ: ಇತ್ತೀಚಿಗೆ ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಸ್ವಯಂ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಪಕ್ಷಕ್ಕೆ ಮುಜುಗರ ತಂದಿದ್ದರು. ಅಭ್ಯರ್ಥಿ ಘೋಷಣೆ ಮಾಡುವ ಹಕ್ಕು ಹೈಕಮಾಂಡ್ ಅಲ್ಲದೇ ಯಾರಿಗೂ ಇಲ್ಲ ಎಂದು ಡಿಕೆಶಿ ಹೇಳಿದ್ದರು.
ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅದ್ಯಾವುಕ್ಕೂ ತಲೆಕೆಡಿಸಿಕೊಂಡಂತಿಲ್ಲ. ಕಾರಣ ಬುಧವಾರ ಹುನಗುಂದ ಕ್ಷೇತ್ರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಗೆ ಟಿಕೆಟ್ ಫಿಕ್ಸ್ ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ ಸಿದ್ದರಾಮಯ್ಯ.
ಹೌದು, ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಕಾಶಪ್ಪನವರ ಒಡೆತನದ ಎಸ್‌ಆರ್‌ಕೆ ಸಕ್ಕರೆ ಕಾರ್ಖಾನೆ ಭೂಮಿ ಪೂಜೆ ನೆರವೇರಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಶಿಲಾನ್ಯಾಸದ ಬಳಿಕ ಬೃಹತ್ ವೇದಿಕೆಯಲ್ಲಿ ಸೇರಿದ್ದ ಕಾಶಪ್ಪನವರ ಅಭಿಮಾನಿಗಳ ಎದುರು ಸಿದ್ದರಾಮಯ್ಯ ಭಾಷಣ ಮಾಡಿದರು.
ರಾಜ್ಯದಲ್ಲಿ ನಾವು ಮತ್ತೆ ನೂರಕ್ಕೆ ನೂರು ಅಽಕಾರಕ್ಕೆ ಬರುತ್ತೇವೆ. ವಿಜಯಾನಂದ ಕಾಶಪ್ಪನವರಿಗೆ ಇಲ್ಲಿ ಟಿಕೆಟ್ ಕೊಡಬೇಕಾ ಎಂದು ಪ್ರಶ್ನಿಸಿದಾಗ, ಕೊಡಬೇಕು ಕೊಡಬೇಕು ಎನ್ನುವ ಉತ್ತರ ಕೂಗಿ ಬಂತು. ಅದಕ್ಕೆ ನೂರಕ್ಕೆ ನೂರು ಎಂದು ಉತ್ತರಿಸಿದ ಮಾಜಿ ಸಿಎಂ, ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಗೆದ್ದು ವಿಧಾನಸಭೆಗೆ ಬರುತ್ತಾರೆ ಎಂದು ಕಾಶಪ್ಪನವರ ಹುನಗುಂದ ಕ್ಷೇತ್ರದ ಕೈ ಅಭ್ಯರ್ಥಿ ಎನ್ನುವ ಸಂದೇಶ ನೀಡಿದರು.
ಹುನಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಕೆಪಿಸಿಸಿಗೆ ೨ ಲಕ್ಷ ರೂ. ತುಂಬಿ ಮೂವರು ಅರ್ಜಿ ಹಾಕಿದ್ದಾರೆ. ಪಕ್ಷ ಇನ್ನು ಅಭ್ಯರ್ಥಿ ಯಾರೆಂದು ತಿಳಿಸಿಲ್ಲ. ಅದಾಗಲೇ ಒಂದು ಹೆಜ್ಜೆ ಮುಂದೆ ಹೋಗಿರುವ ಸಿದ್ದರಾಮಯ್ಯ, ವಿಜಯಾನಂದ ಕಾಶಪ್ಪನವರ ಪಕ್ಷದ ಅಭ್ಯರ್ಥಿ ಎನ್ನುವ ಸಂದೇಶ ನೀಡಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದು ಕೇಳುವುದಷ್ಟೆ ನಮ್ಮ ಕೆಲಸ :
ಇನ್ನು ಸಿದ್ದರಾಮಯ್ಯ ಭಾಷಣಕ್ಕೂ ಮುನ್ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹ ಮಾಜಿ ಸಿಎಂ ಬಗ್ಗೆ ಹಾಡಿ ಹೊಗಳಿದರು. ನಾನು ಸುಳ್ಳಿ ಹೇಳಿ ಬದುಕುವ ಮಗ ಅಲ್ಲ. ಸಿದ್ದರಾಮಯ್ಯ ಸಾಹೇಬ್ರು ಏನು ಹೇಳುತ್ತಾರೋ ಅದನ್ನು ಚಾಚು ತಪ್ಪದೇ ಪಾಲನೆ ಮಾಡುವವರು ಯಾರಾದರೂ ಇದ್ದರೆ ಅದು ವಿಜಯಾನಂದ ಕಾಶಪ್ಪನವರ ಎಂದು ಹೇಳಿಕೊಂಡರು. ರಾಜ್ಯದಲ್ಲಿ ಮತ್ತೆ ನಮ್ಮ ಟಗರು ಬರುತ್ತದೆ. ಮುಂದೆ ನಿಮಗೆ ಒಬ್ಬೊಬ್ಬರಿಗೂ ಐತಿ ಎಂದು ಬಿಜೆಪಿಯವರಿಗೆ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರಿಗೆ ಹುಷಾರು ಇಲ್ಲವೆಂದರೂ ನಮ್ಮ ಸಕ್ಕರೆ ಕಾರ್ಖಾನೆ ಭೂಮಿ ಪೂಜೆಗೆ ಬಂದಿದ್ದಾರೆ. ಹುಷಾರು ಇಲ್ಲ ಎಂದ ತಕ್ಷಣ ನೀವು ಏನೂ ತಿಳಿಯಬೇಡಿ. ಅವರು ಇನ್ನೂ ಗಟ್ಟಿ ಇದ್ದಾರೆ. ಈ ಸಲ ಗುದ್ದಿದ್ರೆ ಬಿಜೆಪಿ ವಾಶ್ ಔಟ್ ಆಗುತ್ತೆ. ಈ ಸಲ ಅಲೆ ಗುದ್ದೋದು. ನೀವೆಲ್ಲ ರೆಡಿ ಇರಿ ಎನ್ನುವ ಮೂಲಕ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕಾಶಪ್ಪನವರ ಸಹ ಪರೋಕ್ಷವಾಗಿಯೇ ಹೇಳಿಕೊಂಡರು.