

ಬಾಗಲಕೋಟೆ: ಬೀಳಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಸದಾಸಿದ್ದವಾಗಿರುವುದಾಗಿ ಬೀಳಗಿ ಶಾಸಕರಾಗಿರುವ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.
ಕಲಾದಗಿಯ ಪ್ರವಾಸಿ ಮಂದಿರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತಾಲೂಕಾ ಆಡಳಿತ, ತಾ.ಪಂ ಸಹಯೋಗದಲ್ಲಿ ಹಮ್ಮಿಕೊಂಡ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 2017-18ರ ಅವಧಿಯಲ್ಲಿ ಸರಕಾರದಿಂದ 2000 ಕೋಟಿ ಅನುದಾನ ತಂದು ಅಭಿವೃದ್ದಿ ಮಾಡಿದಂತೆ ಇಂದು ಕೂಡಾ ಮುಖ್ಯಮಂತ್ರಿಗಳಲ್ಲಿ ಕಾಡಿ ಬೇಡಾದರೂ ಅನುದಾನ ತಂದು ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡುವುದಾಗಿ ತಿಳಿಸಿದರು.
ದೇಶದಲ್ಲಿಯೇ ಮಾದರಿಯಾದ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಇಂದು ಬೇರೆ ಬೇರೆ ರಾಜ್ಯದವರಿಗೆ ಮಾದರಿಯಾಗಿದೆ. ಮತಕ್ಷೇತ್ರದಲ್ಲಿ ಈಗಾಗಲೇ ಸರಕಾರದ ಯೋಜನೆಗಳು ಶೇ.99 ರಷ್ಟು ತಲುಪಿವೆ. ಉಳಿದವು ತಾಂತ್ರಿಕ ದೋಷ, ಮಾಹಿತಿ ಕೊರತೆಯಿಂದಾಗಿ ವಿಳಂಬಗೊಂಡಿದ್ದು, ಅವುಗಳನ್ನು ಕೂಡಾ ಸರಿಪಡಿಸಲಾಗುತ್ತಿದೆ. ಸರಕಾರದ ಋಣ ನಿಮ್ಮ ಮೇಲಿದ್ದು, ನಿಮ್ಮೇಲ್ಲರ ಋಣ ನನ್ನ ಮೇಲಿದ್ದು, ಅದನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನ ನನ್ನದಾಗಿದೆ. ಸರಕಾರ ಗ್ಯಾರಂಟಿ ಯೋಜನೆಗಳಿಗಾಗಿ ಬಜೆಟ್‍ನಲ್ಲಿ 58 ಸಾವಿರ ಕೋರಿ ಮೀಸಲಿರಿಸಿದೆ. ಗಾಳಿ ಮಾತುಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಇಂದಿನ ಮಹಿಳೆಯರ ಆರ್ಥಿಕ ಸುಧಾರಣೆಗಾಗಿ ಸರಕಾರ ಜನಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಫಲಾನುಭವಿಗಳ ತಮ್ಮ ಯೋಜನೆಯನ್ನು ಪಡೆದುಕೊಳ್ಳಲು ಮೊದಲಿನಂತೆ ಹಣ ಮತ್ತು ಸಮಯದ ವ್ಯರ್ತವಾಗದೇ ಗ್ರಾಮ-1, ಮೊಬೈಲ್ ಆಪ್‍ಗಳಂತಹ ಆಧುನಿಕ ತಂತ್ರಜ್ಞಾನದ ನೆರವಿನಿಂದಾಗಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಯೋಜನೆ ಪಡೆಯಲು ಮಧ್ಯವರ್ತಿಗಳ ಹಾವಳಿ ಇರುವದಿಲ್ಲ. ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಇದಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಗಳು ಶೇ.98 ರಷ್ಟು ಅನುಷ್ಠಾನಗೊಂಡಿದೆ ಎಂದು ತಿಳಿಸಿದರು.
ವಿಶ್ರಾಂತಿ ಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ ಕುಟುಂಬ ಹೆಚ್ಚಿನ ನಿರ್ವಹಣೆ ಮಹಿಳೆಯರದ್ದಾಗಿರದ್ದರಿಂದ ಗೃಹಲಕ್ಷ್ಮೀ ಯೋಜನೆಯಿಂದ 2 ಸಾವಿರ ನಿರ್ವಹಣೆಗೆ ಅನುಕೂಲವಾಗಿದೆ. ದೇಶ ಸುತ್ತು ಕೋಶ ಓದು ಎಂಬ ನಾಣ್ನುಡಿಯಂತೆ ಶಕ್ತಿ ಯೋಜನೆಯಡಿ ಸ್ತ್ರೀಯರು ಬೇರೆ ಬೇರೆ ಸ್ಥಳಗಳಲ್ಲಿ ಸಂಚರಿಸುವಂತಾಗಿದೆ. ಆ ದೃಷ್ಠಿಯಿಂದ ಅಂಬೇಡ್ಕರ ಒದಗಿಸಿದ ಸಂವಿಧಾನದಲ್ಲಿ ಹೆಣ್ಣು ಗಂಡು ಬೇದವಿಲ್ಲದೇ ಮತ ಮಾತ್ರ ಅಮೂಲವ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಮಾತನಾಡಿ ಪ್ರತಿ ದೇಶದ ಅಭಿವೃದ್ದಿ ಅದರ ಸೂಚ್ಯಂಕದ ಮೇಲೆ ನಡೆಯುತ್ತಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿವಾಗಿ ಮುಂದುವರೆದಾಗ ಮಾತ್ರ ಸೂಚ್ಯಂತಕ ಪ್ರಮಾಣ ಹೆಚ್ಚಾಗಲು ಸಾಧ್ಯ. ಸರಕಾರ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಶೇ.55 ಮಹಿಳೆಯರು ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಜಿಲ್ಲೆಗೆ 3 ಪ್ರಶಸ್ತಿಗಳ ಮಹಿಳಾ ಒಕ್ಕೂಟಗಳಿಗೆ ಲಭಿಸಿರುವುದು ಹೆಮ್ಮೆಯ ವಿಷಯ ಎಂದರು. ಪ್ರಾರಂಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸಾಂಕೇತಿವಾಗಿ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕಲಾದಗಿ ಗ್ರಾ.ಪಂ ಅಧ್ಯಕ್ಷೆ ಕಾಕುಂಬಿ ರೋಣ, ಉಪಾದ್ಯಕ್ಷ ಪಕೀರಪ್ಪ ಮಾದರ, ತಹಶೀಲ್ದಾರಗಳಾದ ಅಮರೇಶ ಪಮ್ಮಾರ, ಜೆ.ಬಿ.ಮಜ್ಜಗಿ, ತಾ.ಪಂ ಇಓಗಳಾದ ಎಸ್.ಎಂ.ರೇವಡಿ, ಅಭಯಕುಮಾರ ಮೊರಬ, ಸಂತೋಷ ಮ್ಯಾಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.