ಮಠಗಳು ಭಕ್ತರ ಹೃದಯಕ್ಕೆ ಹತ್ತಿರವಾಗಿರಬೇಕು

bkt-3-5
ಬಾಗಲಕೋಟೆ ತಾಲೂಕಿನ ಬಿಲ್‌ಕೆರೂರ ಬಿಲ್ವಾಶ್ರಮ ಹಿರೇಮಠದಲ್ಲಿ ಶನಿವಾರ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಸಮಾರಂಭವನ್ನು ಮುಕ್ತಿಮಂದಿರದ ವಿಮಲರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.
Published on

ಬಾಗಲಕೋಟೆ: ಭಕ್ತಿ, ಜ್ಞಾನ, ಸತ್ಯದ ಅರಿವಿನ ಮನೆಯಾಗಿರುವ ಮಠಗಳು ಭಕ್ತರ ಹೃದಯಕ್ಕೆ ಹತ್ತಿರವಾಗಿರಬೇಕು ಎಂದು ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿಲ್‌ಕೆರೂರ ಗ್ರಾಮದ ಬಿಲ್ವಾಶ್ರಮ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ ೪೨ ನೇ ಪುಣ್ಯಾರಾಧನೆ ನಿಮಿತ್ತ ಶನಿವಾರ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯಲ್ಲಿ ಉಪದೇಶ ನೀಡಿ, ಮಠಗಳು ಕೇವಲ ಭಕ್ತರಿಂದ ದೇಣಿಗೆ ಪಡೆದು ಮಠದ ಉದ್ಧಾರ ಮಾಡಿಕೊಳ್ಳದೇ ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಬಿಲ್‌ಕೆರೂರ ಬಿಲ್ವಾಶ್ರಮ ಹಿರೇಮಠ ಭಕ್ತರ ಹೃದಯಕ್ಕೆ ಹತ್ತಿರವಾಗಿದ್ದು, ಭಕ್ತರ ಸಹಕಾರದಿಂದ ಸಿದ್ಧಲಿಂಗ ಶಿವಾಚಾರ್ಯರು ಧಾರ್ಮಿಕ ಕಾರ್ಯಗಳ ಜೊತೆಗೆ ಶೈಕ್ಷಣಿಕ ಸಂಸ್ಥೆ ತೆರೆದು ಬಡ ಮಕ್ಕಳ ಶಿಕ್ಷಣಕ್ಕೆ ಬೆಳಕಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಕ್ತಿಮಂದಿರದ ವಿಮಲರೇಣುಕ ಶಿವಾಚಾರ್ಯರು, ದಾನಿಗಳು ನೀಡಿದ ದೇಣಿಗೆ ಸತ್ಪಾತ್ರಕ್ಕೆ ಸಲ್ಲಬೇಕು. ಅಂದಾಗ ದಾನ ನೀಡಿದ ವ್ಯಕ್ತಿಗಳ ಮನಸ್ಸಿಗೆ ಸಂತೋಷವಾಗುತ್ತದೆ ಎಂದರು.

ಶ್ರೀಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ನೂತನ ರಥ ನಿರ್ಮಾಣಕ್ಕೆ ಗ್ರಾಮಸ್ಥರಲ್ಲದೇ ಹೊರಗಿನ ನೂರಾರು ಜನ ಭಕ್ತರು ಸಹಾಯ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ಶೀಘ್ರದಲ್ಲೇ ರಥ ನಿರ್ಮಿಸುವ ಕಾರ್ಯಕ್ಕೆ ಅಣಿಯಾಗುವುದಾಗಿ ಹೇಳಿದರು.

ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಬೀಳಗಿ ಗುರುಪಾದ ಶಿವಾಚಾರ್ಯರು, ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯ ಶ್ರೀಗಳು, ನಿಡಗುಂದಿಯ ರುದ್ರಮುನಿ ಶಿವಾಚಾರ್ಯ, ಜಿ.ಎನ್.ಪಾಟೀಲ, ಶಿವಾನಂದ ಕಾಶಪ್ಪನವರ, ಎನ್.ಜಿ.ಕೋಟಿ, ಶಂಕರಗೌಡ ಮೇಟಿ, ಎಸ್.ಎನ್.ರಾಂಪುರ, ಎಂ.ಎಸ್.ವೈಜಾಪೂರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net