ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ದೂರವಿರಲಿ

7.npk.1
Published on

ನಾಪೋಕ್ಲು: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ತಮ್ಮ ಮಕ್ಕಳ ಮೇಲೆ ಪಾಲಕರು ಸದಾ ಕಣ್ಣಿಟ್ಟಿರಬೇಕು ಎಂದು ಜಿಲ್ಲಾ ಬಾರ್ ಕೌನ್ಸಿಲ್ ಅಧ್ಯಕ್ಷ ವಕೀಲ ಎಂ.ಎ.ನಿರಂಜನ್ ಹೇಳಿದರು.

ಸಮೀಪದ ಮೂರ್ನಾಡಿನ ಮಾರುತಿ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣ ದೂರವಿರಬೇಕು. ದುಶ್ಚಟಗಳಿಗೆ ಬಲಿಯಾಗದಂತೆ ಉತ್ತಮ ಗೆಳೆಯರ ಒಡನಾಟ ಹೊಂದಿರಬೇಕು. ಶೈಕ್ಷಣಿಕವಾಗಿ ದೊರೆಯುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮಾನವೀಯತೆಯೊಂದಿಗೆ ಬದುಕು ಮತ್ತು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಮಾರುತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಕೆ.ಅಪ್ಪಚ್ಚು ಮಾತನಾಡಿ, ಪಾಲಕರ ಸಹಕಾರದಿಂದ ಶಾಲೆ ಪ್ರಗತಿ ಹೊಂದುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಅವಧಿಯಲ್ಲಿ ಉತ್ತಮ ಹವ್ಯಾಸದ ಜತೆಗೆ ತಮ್ಮಲ್ಲಿರುವ ಪ್ರತಿಭೆ ಬಳಸಿಕೊಂಡು ಮುಂದೆ ಬರಬೇಕು ಎಂದರು.

ಕ್ರೀಡೆಗಳಲ್ಲಿ ವಿಜೇತರಾದವರಿಗೆ, ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಟ್ರೋಫಿ, ಪದಕಗಳನ್ನು ನೀಡಲಾಯಿತು. ಪಾಲಕರಿಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾಂಶುಪಾಲೆ ಎಂ.ಎಂ.ಸುಮಿತಾ ವಾರ್ಷಿಕ ವರದಿ ಮಂಡಿಸಿದರು.

ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಡಿ.ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಎಂ.ಎಂ ಅರುಣ್ ಅಪ್ಪಚ್ಚು , ನಿರ್ದೇಶಕರಾದ ಬಡುವಂಡ ನೀಲಮ್ಮ ಮುದ್ದಪ್ಪ, ಮುಂಡಂಡ ನೀಲವ್ವ ಮುತ್ತಣ್ಣ, ಸದಸ್ಯರಾದ ಬಡುವಂಡ ಕುನ್ನು ಅಪ್ಪಚ್ಚು, ಚೇದ್ರಿಮಡ ರೂಪಾ ಸೋಮಯ್ಯ, ಉಪಪ್ರಾಂಶುಪಾಲೆ ಎಂ.ಡಿ.ಹೇಮಾವತಿ, ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net