ಮಕ್ಕಳು ಮೊಬೈಲ್ ಗೀಳಿನಿಂದ ಹೊರಬರಬೇಕಿದೆ

IMG-20250113-WA0250
Published on

ಅರಸೀಕೆರೆ ಗ್ರಾಮಾಂತರ: ಮಕ್ಕಳ ಪ್ರತಿಭೆ ಭವಿಷ್ಯದ ಜ್ಞಾನ ಸಂಪತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ಮಕ್ಕಳು ಹೆಚ್ಚಿನ ಆಸಕ್ತಿ ಹೊಂದಿರುವುದರಿಂದ ಮಾನಸಿಕ, ದೈಹಿಕವಾಗಿ ಸಂಕುಚಿತವಾಗುತ್ತಿದ್ದು, ಮೊಬೈಲ್ ಗೀಳಿನಿಂದ ಹೊರಬರಬೇಕಾಗಿದೆ ಎಂದು ನಿರಂಜನ ಪೀಠದ ಶ್ರೀರುದ್ರಮುನಿ ಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಮತ್ತು ಬಸವೇಶ್ವರ ಐಟಿಐ ಕಾಲೇಜು ವತಿಯಿಂದ ಸೋಮವಾರ ಆಯೋಜಿಸಿದ್ದ ಬಸವ ವೈಭವ-2025 ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನೆಯಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಅತಿ ಹೆಚ್ಚು ಕಾಲ ಕಳೆಯುತ್ತಾರೆ, ಶಿಕ್ಷಣದ ಕಡೆ ಹೆಚ್ಚು ಗಮನಹರಿಸುತ್ತಿಲ್ಲ. ಇದರಿಂದ ಅವರ ಚಟುವಟಿಕೆ ಕಡಿಮೆಯಾಗಿ ಮಂಕಾಗಿ ಕಾಣುತ್ತಾರೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮೂರು ಕಳಸದ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನೆಯಲ್ಲಿ ಪಾಲಕರು ಮಕ್ಕಳ ಶಿಕ್ಷಣದ ಕಡೆ ಗಮನಹರಿಸುತ್ತಿಲ್ಲ. ಶಾಲೆಯಿಂದ ಬಂದ ಮಕ್ಕಳಿಗೆ ಶಾಲೆಯಲ್ಲಿ ಏನು ನಡೆಯಿತು ಎಂದು ಕೇಳುವುದಿಲ್ಲ, ಆಟ, ಪಾಠದ ಕಡೆ ಗಮನಕೊಡು ಎಂದು ಹೇಳದೆ ಇರುವುದರಿಂದ ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ತಾಲೂಕು ಸಾಧು ವೀರಶೈವ ಲಿಂಗಾಯಿತ ಸಮಾಜದ ಮುಖಂಡ ಮರಳಸಿದ್ದಸ್ವಾಮಿ ನಾಗಸಮುದ್ರ ಮಾತನಾಡಿ, ಮಕ್ಕಳಿಗೆ ಪಠ್ಯಪುಸ್ತಕಗಳ ಜತೆಗೆ ಭಾರತೀಯ ಮೂಲ ಸಂಸ್ಕೃತಿಯನ್ನು ಪರಿಚಯಿಸುವ ನೈತಿಕ ಗುಣಮಟ್ಟದ ಶಿಕ್ಷಣ ಬೇಕು, ಬಸವೇಶ್ವರ ವಿದ್ಯಾಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದರು.

ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರ ಸ್ವಾಮೀಜಿ, ಹಾಸನ ಸೀಗೆಗುಡ್ಡದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎಲ್.ಮಂಜು, ಮಲ್ಲಿಕಾರ್ಜುನ್ ,ರವಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆಂಗಳೂರು ಪಬ್ಲಿಕ್ ಶಾಲೆಯ ಶಿಕ್ಷಕ ಶ್ರೀಕಂಠಪ್ಪ ಹಾಗೂ ಬಸವೇಶ್ವರ ಐಟಿಐ ಕಾಲೇಜಿನ ಪ್ರಾಂಶುಪಾಲ ಭರತ್, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್, ಮುಖಂಡರಾದ ಶಂಕರ್, ಸತೀಶ್, ಶಿವಲಿಂಗಪ್ಪ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net