

ರಾಮನಗರ :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ರೋಗ ನಿರೋಧಕದ ಒಂದನೇ ಲಸಿಕೆ ನೀಡಲಾಗಿದ್ದು, ಎರಡನೇ ಲಸಿಕೆಯನ್ನು ತಪ್ಪದೆ ನೀಡುವಂತೆ ಜಿಲ್ಲಾಧಿಕಾರಿ ಯಶವಂತ್ .ವಿ ಗುರುಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಅರ್ಹ ಮಕ್ಕಳೆಲ್ಲರಿಗೂ ರೋಗ ನಿರೋಧಕ ಲಸಿಕೆ ನೀಡಲೇಬೇಕು, ಯಾವ ಮಗೂ ಇದರಿಂದ ಹೊರ ಉಳಿಯದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ಎಚ್ಚರ ವಹಿಸಬೇಕು, ಲಸಿಕೆ ನೀಡಿದ ಮಾಹಿತಿಯನ್ನು ಆರ್.ಸಿ.ಎಚ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಕುಟುಂಬ ವರ್ಗದವರು ಅನಾರೋಗ್ಯದಿಂದ ಬಳಲುವ ಮಗುವನ್ನು ಮಕ್ಕಳ ತಜ್ಞರಲ್ಲಿ ತಪಾಸಣೆ ಮಾಡಿಸಬೇಕು. ತಜ್ಞರು ನೀಡುವ ಸಲಹೆಯಂತೆ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಬೇಕೆಂದರು.
ಆಶಾ ಕಾರ್ಯಕರ್ತರು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಗರ್ಭಿಣಿ ಮತ್ತು ಬಾಣಂತಿಯರನ್ನು ಭೇಟಿ ಮಾಡಿದಾಗ ಮಕ್ಕಳಿಗೆ ಹಾಲುಣಿಸುವುದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 14 ದಡಾರ ಪ್ರಕರಣಗಳಿದ್ದು, ದಡಾರವನ್ನು ತಡೆಗಟ್ಟುವಲ್ಲಿ ಹಾಗೂ ದಡಾರ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆಯೂ ತಿಳಿಸಿದ ಅವರು, ಜಿಲ್ಲೆಯಲ್ಲಿ 3,980 ಮಂದಿ ಎಚ್.ಐ.ವಿ ಭಾದಿತರಿದ್ದು, ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಎಚ್.ಐ. ವಿ ಯಿಂದ ಮುಕ್ತಿ ಪಡೆಯಬಹುದು. ಈಗ ಪ್ರತಿ ರಕ್ತ ಪರೀಕ್ಷೆಯೊಂದಿಗೆ ಎಚ್.ಐ.ವಿ ಪರೀಕ್ಷೆ ಮಾಡಲಾಗುತ್ತಿದೆ, ಪರೀಕ್ಷೆಯು ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಲಭ್ಯವಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಕಿರುಕುಳ ಮತ್ತು ಹಲ್ಲೆ ನಡೆಸಲು ಬಂದರೆ ಮಾಹಿತಿಯನ್ನು ನೀಡುವಂತೆ ಹಾಗೂ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ಡಾ. ರಾಜು, ಡಾ. ಕುಮಾರ್, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.