

ಮೇಲುಕೋಟೆ: ಮಕ್ಕಳು ಪಕೃತಿಯ ಅನುಭವ ಪಡೆಯುವುದರಿಂದ ನೈಜ ಕಲಿಕೆ ಸಿಗಲಿದೆ ಎಂದು ಮಂಡ್ಯ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಅಭಿವೃದ್ಧಿ) ಆನಂದ್ ಅಭಿಪ್ರಾಯಪಟ್ಟರು.
ಮೇಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕರು ತಮ್ಮೂರಿನ ಪ್ರಾಕೃತಿಕ ವಿಶೇಷತೆ, ಸ್ಮಾರಕಗಳಿದ್ದರೆ ಅವುಗಳ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಸಂರಕ್ಷಿಸಲು ಪ್ರೇರೇಪಿಸಬೇಕು. ಇದರಿಂದ ಚಿಕ್ಕಂದಿನಿಂದಲೇ ದೇಶ ಪ್ರೇಮ ಬೆಳೆಸಲು ಸಹಕಾರಿಯಾಗುತ್ತದೆ. ಮೇಲುಕೋಟೆ ಭವ್ಯ ಸ್ಮಾರಕಗಳ ತವರೂರು ಹಾಗೂ ದೇವಾಲಯಗಳ ಸುಂದರ ಪ್ರವಾಸಿ ತಾಣವಾಗಿದೆ. ಮಕ್ಕಳು ಶಿಕ್ಷಕರೊಂದಿಗೆ ಆಗಮಿಸಿ ಇಲ್ಲಿನ ವಿಶೇಷತೆಗಳ ಬಗ್ಗೆ ಅನುಭವ ಪಡೆಯುತ್ತಿರುವುದು ಖುಷಿಯ ಸಂಗತಿ ಎಂದರು.
ಮೇಲುಕೋಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಜಿಪಂನಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು. ಮೇಲುಕೋಟೆ ಗ್ರಾಪಂ ಪಿಡಿಒ ರಾಜೇಶ್ವರ್, ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರ, ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಎಸ್.ಎನ್ ಸಂತಾನರಾಮನ್, ಶಿಕ್ಷಕರಾದ ಮಹಾಲಕ್ಷ್ಮೀ, ಬಿ.ಜಯಂತಿ, ಪೂರ್ಣಿಮಾ, ಶ್ರುತಿ, ಗಿರಿಜಾ, ಅಡುಗೆ ಸಹಾಯಕಿಯರಾದ ಕಮಲಾ, ಜಯಲಕ್ಷ್ಮೀ ಭಾಗವಹಿಸಿದ್ದರು.
ಮಕ್ಕಳ ದಿನಾಚರಣೆ ಅಂಗವಾಗಿ ಮೇಲುಕೋಟೆ ಶಾಲಾ ಮಕ್ಕಳಿಂದ ತುಂಬಿತ್ತು. ಸಾವಿರಾರು ಮಕ್ಕಳು ಆಗಮಿಸಿದ್ದರು. ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮಕ್ಕಳು ವನಭೋಜನ ಸ್ವೀಕರಿಸಿದರು. ಬಾಲಕಿಯರ ಶಾಲೆಯ ಮಕ್ಕಳು ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಎಸ್‌ಇಟಿ ಪಬ್ಲಿಕ್ ಶಾಲೆ ಮಕ್ಕಳು ನೃತ್ಯ ಮಾಡಿ ಸಂಭ್ರಮಿಸಿದರು.