ಮಕ್ಕಳಿಗೆ ಪಠ್ಯದಷ್ಟೇ ಸ್ಪರ್ಧೆಗಳು ಮುಖ್ಯ

27=-kkr12(12-24
Published on

ಕಿಕ್ಕೇರಿ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪರ್ಧೆಗಳು ಮದ್ದಿನಂತೆ ಕೆಲಸ ಮಾಡಲಿವೆ ಎಂದು ಕೆಪಿಎಸ್ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ತಿಳಿಸಿದರು.

ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ ಸರ್‌ಸಿವಿ ರಾಮನ್ ಜನ್ಮದಿನ ನೆನಪಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಣಿತ ವಸ್ತುಪ್ರದರ್ಶನ ಹಾಗೂ ಬೆಂಕಿರಹಿತ ಅಡುಗೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕೆಲಸ ದೂರವಾಗಿದೆ. ಈ ಶಾಲೆಯಲ್ಲಿ ಓದಿದ ಅಸಂಖ್ಯಾತ ಮಕ್ಕಳು ಉನ್ನತ ಹುದ್ದೆ ಪಡೆದಿದ್ದಾರೆ. ಇಲ್ಲಿನ ಶಿಕ್ಷಕರ ಕಾರ್ಯಚಟುವಟಿಕೆ ಮಾದರಿಯಾಗಿದೆ ಎಂದರು.

ಪ್ರಾಂಶುಪಾಲ ದೊರೆಸ್ವಾಮಿ ಮಾತನಾಡಿ, ಮಕ್ಕಳು ಸುಪ್ತ ಮನಸ್ಸಿನ ಚಟುವಟಿಕೆಯನ್ನು ಹೊರಹಾಕಲು ಸ್ಪರ್ಧೆ ಉತ್ತಮ ವೇದಿಕೆಯಾಗಿದೆ. ಶಿಕ್ಷಕರ ಪರಿಶ್ರಮದಿಂದ ಮಕ್ಕಳು ಪಠ್ಯದ ವಿಷಯಗಳನ್ನೇ ಆಯ್ಕೆ ಮಾಡಿಕೊಂಡು ವಿವಿಧ ಮಾದರಿಗಳನ್ನು ತಯಾರಿಸಿರುವುದು ಖುಷಿ ನೀಡುವ ವಿಷಯವಾಗಿದೆ ಎಂದು ಹೇಳಿದರು.

ಉಪ ಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳು ಕೌಶಲತೆ ಖುಷಿ ನೀಡುವಂತಿದೆ. ಸ್ಥಳೀಯ ಪರಿಕರಗಳನ್ನು ಬಳಸಿಕೊಂಡು ಗಣಿತದ ಸೂತ್ರದಂತಹ ಹತ್ತು ಹಲವು ಮಾದರಿಗಳನ್ನು ತಯಾರಿಸಿದ್ದಾರೆ. ಇವರು ನೀಡುವ ಪ್ರಾತ್ಯಕ್ಷಿಕೆ ಬಲುಬೇಗ ಮಕ್ಕಳಿಗೆ ಗ್ರಹಿಸುವಂತಿದೆ ಎಂದು ಮಕ್ಕಳ ಕೌಶಲತೆಯನ್ನು ಪ್ರಶಂಶಿಸಿದರು.

ಕೆಪಿಎಸ್ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಮತಾ ಮಾತನಾಡಿ, ತಮ್ಮ ಮಕ್ಕಳ ಪ್ರತಿಭೆ ಕಂಡು ಖುಷಿಯಾಗಿದೆ. ಪ್ರಥಮವಾಗಿ ಮಕ್ಕಳು ಬಲು ಇಚ್ಛೆಪಟ್ಟು ತಯಾರಿಸುವ ಮಾದರಿಗಳು ಗಣಿತದ ವಿಷಯಗಳನ್ನು ಸುಲಭವಾಗಿ, ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತಿವೆ ಎಂದರು.

ಶರಾವತಿ ಸದನದ ಶಿಕ್ಷಕರಾದ ಎ.ಸಿ.ರಜಿನಿ, ಎಸ್.ಬಿ. ದೀಪಕ್, ಲಕ್ಷ್ಮೀದೇವಿ ವಸ್ತುಪ್ರದರ್ಶನ ಉಸ್ತುವಾರಿ ವಹಿಸಿದ್ದರು. 35ಕ್ಕೂ ಹೆಚ್ಚು ವಿವಿಧ ಗಣಿತದ ಮಾದರಿ ಹಾಗೂ 32 ವಿಭಿನ್ನ ರೀತಿಯ ಬೆಂಕಿರಹಿತ ಅಡುಗೆ ತಯಾರಿಕೆಯನ್ನು ಮಕ್ಕಳು ಪ್ರದರ್ಶಿಸಿದರು.

ಬೆಂಕಿರಹಿತ ಅಡುಗೆಗಳಾದ ಫ್ರೂಟ್ ಸಲಾಡ್, ಕೋಸಂಬರಿ, ರಸಾಯನ, ಬಾಳೆಹಣ್ಣು, ಪಪ್ಪಾಯ ಹಣ್ಣು ಜ್ಯೂಸ್‌ನಂತಹ ಪೌಷ್ಟಿಕಾಂಶಭರಿತ ತಾಜಾ ಹಣ್ಣಿನ ಜ್ಯೂಸ್ ತಯಾರಿಸಿದ್ದರು. ಪೈಥಾಗೊರಸನ ಪ್ರಮೇಯದಿಂದ ಹಿಡಿದು ಹಲವು ಬೀಜಗಣಿತ, ರೇಖಾಗಣಿತ ಸೂತ್ರ, ಭೂಕಂಪನ ಉಂಟಾದ ಮುನ್ನೆಚ್ಚರಿಕೆ ನೀಡುವ ಪ್ರಯೋಗದಂತಹ ಹಲವು ಮಾದರಿಗಳು ಮಕ್ಕಳ ಕೌಶಲತೆಗೆ ಸಾಕ್ಷಿಯಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ಪ್ರೌಢಶಾಲಾ ಸಹಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ. ಬಸವರಾಜು, ಬೋಧಕ ವೃಂದದ ರಮೇಶ್, ರಜಿನಿ, ನಾಗೇಶ್, ಚೈತ್ರಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net