

ಕಲಬುರಗಿ: ಮಕ್ಕಳಿಗೆ ನೈಜ ಚರಿತ್ರೆ ಹೇಳಿಕೊಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದಲಿಂಗಯ್ಯ ಹೇಳಿದರು.
ಗಾಂಧಿ ಜಯಂತಿ ನಿಮಿತ್ತ ಕಲಬುರಗಿ ರಂಗಾಯಣದಿಂದ ಡಾ.ಎಸ್.ಎಂ. ಪಂಡಿತ ರಂಗಮAದಿರದಲ್ಲಿ ಭಾನುವಾರ ಆಯೋಜಿಸಿದ್ದ ಬಾಪೂಜಿ ತೊಗಲು ಬೊಂಬೆ ಆಟ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨ನೇ ಮಹಾಯುದ್ಧದ ನಂತರ ಹಿಂಸಾಕೃತ್ಯ ನಡೆದಿತ್ತು. ನಮ್ಮ ದೇಶದಲ್ಲಿ ಜನಾಂಗೀಯ ಯುದ್ಧ ನಡೆದಿದೆ. ಈ ಸಂದರ್ಭದಲ್ಲಿ ಗಾಂಧೀಜಿಯ ಅಹಿಂಸೆ, ಸತ್ಯಾಗ್ರಹ ಪ್ರಾಮುಖ್ಯ ಪಡೆದುಕೊಳ್ಳಲಿದೆ ಎಂದರು.
ಸದ್ಯದ ಕಲುಷಿತ ರಾಜಕಾರಣದಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡು ಹೊರಟಿರುವವರು ಶಾಸಕ ಬಿ.ಆರ್. ಪಾಟೀಲ್. ಗಾಂಧೀಜಿ ಆದರ್ಶ ಮುಸುಕಾಗುತ್ತಿದೆ. ಆದರೆ ಈ ನೆಲದ ಮೂಲ ತೊಗಲು ಬೊಂಬೆಯಾಟ ಆಯೋಜಿಸುವ ಮೂಲಕ ಜನಪರ ಮುಖೇನ ಗಾಂಧಿ ಪುನರ್‌ಮನನ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು.
ಚರಕ ತಿರುಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್ ಮಾತನಾಡಿ, ಜಗತ್ತಿನಲ್ಲಿ ಗಾಂಧೀಜಿ ಮೀರಿಸುವಂಥ ವ್ಯಕ್ತಿ ಇನ್ನೂ ಬಂದಿಲ್ಲ. ಆದರೆ ನಮ್ಮ ದೇಶದಲ್ಲಿ ಈ ಮಹಾತ್ಮನಿಗೆ ಅವಹೇಳನ ಮಾಡುವ ಕೆಲಸ ನಡೆದಿದೆ ಎಂದು ವಿಷಾದಿಸಿದರು.
ಗಾಂಧಿ ಕಂಡ ರಾಮ, ಕಬೀರ ಕಂಡ ರಾಮ, ಹನುಮಂತ ಕಂಡ ರಾಮ ಬೇರೆ. ಆದರೀಗ ರಾಮನನ್ನು ನೋಡುವ ದೃಷ್ಟಿಕೋನ ಬೇರೆಯಾಗಿದೆ. ರಾಮ ದಾರ್ಶನಿಕ, ಆದರ್ಶ ರಾಜ. ಆದರೆ ಬಿಲ್ಲು ಬಿಡುವ, ಕೊಲ್ಲುವ ರಾಮ ಬೇಕಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸದ ರಾಮ ಇಂದಿನ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಮಹಾತ್ಮ ಗಾಂಧಿಯನ್ನು ಇಡೀ ವಿಶ್ವ ಕೊಂಡಾಡಿದೆ. ಅಂತಹ ದೊಡ್ಡ ವ್ಯಕ್ತಿಯಾದರೂ ಅಹಿಂಸೆ, ಸತ್ಯ ಬಿಟ್ಟು ನನ್ನಲ್ಲಿ ಬೇರೇನೂ ಇಲ್ಲ ಎಂದು ಹೇಳಿದ್ದು ಅವರ ಸರಳತೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.
ಬೆಂಗಳೂರಿನ ಸಾಹಿತಿ ಆಶಾದೇವಿ ಮಾತನಾಡಿ, ಸರಳ ಮತ್ತು ಸ್ವಾವಲಂಬಿ ಬದುಕಿಗಾಗಿ ಗಾಂಧಿ ತತ್ವ, ಸಿದ್ಧಾಂತ ಒಪ್ಪಲೇಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಕೋಮುವಾದದಿಂದ ಹೊರಬರಲು ಗಾಂಧೀಜಿ ಸಿದ್ಧಾಂತ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ರAಗಾಯಣ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು. ಕಪಿಲ್ ಚಕ್ರವರ್ತಿ ನಿರೂಪಣೆ ಮಾಡಿದರು. ಹಿರಿಯ ಕಲಾವಿದ ಸಿದ್ಧಾರ್ಥ ಚಿಮ್ಮಇದಲಾಯಿ ಮತ್ತು ತಂಡದ ಭಜನ್, ಬೆಳಗಲ್ಲು ಹನುಮಂತ ತೊಗಲು ಬೊಂಬೆ, ಬಳ್ಳಾರಿಯ ರಾಮಾಂಜನೇಯ ತೊಗಲು ಬೊಂಬೆ ಮೇಳ ಟ್ರಸ್ಟ್ ಬೊಂಬೆಯಾಟ ಪ್ರಸ್ತುತಪಡಿಸಿದವು. ನಾಡೋಜ ಬೆಳಗಲ್ಲು ವೀರಣ್ಣ ನಿರ್ದೇಶನ ಮಾಡಿದರು.