

ಪಾಂಡವಪುರ: ಬಹುಮಾನಕ್ಕಾಗಿ ಯಾವತ್ತು ಅನ್ಯಾಯ ಮತ್ತು ಅಧರ್ಮದ ಆಟ ಆಡಬಾರದು. ಸೋತರೂ ಪರವಾಗಿಲ್ಲ ಕ್ರೀಡೆಯಲ್ಲಿ ಧರ್ಮವಾಗಿರಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನಮ್ಮ ತಂಡ ಗೆಲ್ಲಬೇಕು ಎಂಬ ಉದ್ದೇಶಕ್ಕೆ ಅಧರ್ಮದ ಕಡೆ ವಾಲಬಾರದು. ಮಕ್ಕಳಿಗೂ ಇದೇ ರೀತಿಯ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಯಾವುದೇ ದೇಶದ ಕ್ರೀಡಾಪಟು ಗೆದ್ದರೂ ಆ ದೇಶದ ಧ್ವಜ ಹಾರಿಸಿ ಅಲ್ಲಿನ ರಾಷ್ಟ್ರಗೀತೆ ಹಾಡುತ್ತಾರೆ. ಕ್ರೀಡೆ ಬಿಟ್ಟರೆ ಬೇರ‌್ಯಾವ ಕ್ಷೇತ್ರದಲ್ಲೂ ಈ ರೀತಿಯ ಮನೋಭಾವ ಕಾಣಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ನಾನು ಕ್ರೀಡಾ ಕ್ಷೇತ್ರವನ್ನು ಹೆಚ್ಚು ಪ್ರೀತಿಸುತ್ತೇನೆ. ಇದೊಂದು ದೊಡ್ಡ ಗೌರವದ ವಿಚಾರವಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳಿಗೆ ಆತ್ಮಬಲ, ಆತ್ಮಸ್ಥೈರ್ಯ ತುಂಬಬೇಕು. ಸೋಲನ್ನು ಗೆಲುವಿನಷ್ಟೇ ಸಮಾನವಾಗಿ ಸ್ವೀಕರಿಸುವಷ್ಟು ಮನೋಬಲ ತುಂಬಿದರೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸೋತಾಗ ಕುಗ್ಗದೆ ಆತ್ಮಹತ್ಯೆಗೆ ಶರಣಾಗುವುದಿಲ್ಲ. ಇದರ ಜತೆಗೆ ಕ್ರೀಡೆಯಲ್ಲಿ ಅನ್ಯಾಯವಾಗುವುದು ಗಮನಕ್ಕೆ ಬಂದರೆ ಪ್ರಶ್ನಿಸಲು ಸಾಧ್ಯವಾಗದಿದ್ದರೂ ಅದನ್ನು ಪ್ರೋತ್ಸಾಹಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.
ಜ್ಞಾನ, ಕ್ರೀಡೆ, ಆರೋಗ್ಯ ಎಲ್ಲವೂ ದೈಹಿಕ ಶಿಕ್ಷಣ ಶಿಕ್ಷಕರ ಕೈಯಲ್ಲಿದೆ. ದೈಹಿಕ ಶಿಕ್ಷಣ ಶಿಕ್ಷಕರ ಒಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಸಮನಾಗಿ ಕೆಲಸ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಗಣಿತ, ವಿಜ್ಞಾನದ ಶಿಕ್ಷಕರು ಬರಲಿಲ್ಲ ಎಂದರೆ ಆಟಕ್ಕೆ ಹೋಗಬಹುದು ಎಂದು ಖುಷಿ ಪಡುತ್ತಾರೆ. ಆದರೆ, ದೈಹಿಕ ಶಿಕ್ಷಕರು ಶಾಲೆಗೆ ಗೈರಾದರೆ ಬೇಸರ ಪಡುತ್ತಾರೆ. ಹಿಂದೆ ಶಾಲೆಗೆ ಭಯದಿಂದ ಹೋಗುತ್ತಿದ್ದೆವು. ಈಗ ಮಕ್ಕಳಲ್ಲಿ ಆ ಭಯ ಕಾಣುತ್ತಿಲ್ಲ. ಶಿಕ್ಷಕ ಶಿಕ್ಷೆ ಕೊಡುವ ಹಕ್ಕನ್ನು ಕಳೆದುಕೊಂಡಿದ್ದಾನೆ. ಮಕ್ಕಳ ಮನಸ್ಸನ್ನು ಅರಿತು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.
ದೈಹಿಕ ಶಿಕ್ಷಣ ಕಾಲೇಜಿ ನಿವೃತ್ತ ಪ್ರಾಂಶುಪಾಲ ಡಾ.ಸುಂದರ್ ರಾಜ್ ಅರಸ್ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಪಟುಗಳ ಹುಟ್ಟಿಗೆ ತಳಪಾಯ ಹಾಕುತ್ತಾರೆ. ಕ್ರೀಡೆ ಮನೋ ವಿಜ್ಞಾನದ ಶಾಖೆ ಇದ್ದಂತೆ. ಆರೋಗ್ಯವಂತ ಮನಸ್ಸು ಮತ್ತು ಆರೋಗ್ಯವಂತ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ಶಿಕ್ಷಕರ ಕೆಲಸ. ಕ್ರೀಡೆ ಎಂದರೆ ವ್ಯಕ್ತಿತ್ವ ರೂಪಿಸುವ ಆಟ. ಅತ್ಯುತ್ತಮ ಮನುಷ್ಯನನ್ನಾಗಿ ತಯಾರುಗೊಳಿಸುವ ಶಕ್ತಿ ಕ್ರೀಡೆಗಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿವೃತ್ತಗೊಂಡ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ, ಉಪಾಧ್ಯಕ್ಷ ಕುಮಾರ್, ಖಜಾಂಚಿ ಬಾಲರಾಜ್, ಕಾರ್ಯದರ್ಶಿ ವೇದಾವತಿ, ತಾಲೂಕು ಅಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಕಡತನಾಳು ಶ್ರೀನಿವಾಸ್, ಉಪಾಧ್ಯಕ್ಷ ವಿಶ್ವನಾಥ್, ಎಚ್.ಎನ್.ರಘು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ರಾಜ್ಯ ಪರಿಷತ್ ಸದಸ್ಯ ಡಾ.ಸಿ.ಎ.ಅರವಿಂದ್ ಇತರರು ಇದ್ದರು.