

| ದೇವರಾಜ್ ಎಲ್. ಬೆಂಗಳೂರು
ಕರೊನಾ ಹಾವಳಿಗೆ ಇಡೀ ಜಗತ್ತು ಬೆಚ್ಚಿಬಿದ್ದಿದೆ. ಇಡೀ ವ್ಯವಸ್ಥೆ ಕಂಗಾಲಾಗಿದೆ. ವರ್ಷಪೂರ್ತಿ ಶಾಲೆ, ಪುಸ್ತಕ, ಹೋಂ ವರ್ಕ್ ಪ್ರಜೆಕ್ಟ್, ಟೆಸ್ಟ್, ಎಕ್ಸಾಂ ಎಂದು ಹೈರಾಣಾಗುತ್ತಿದ್ದ ಮಕ್ಕಳು ಬೇಸಿಗೆ ರಜೆ ಸಂಭ್ರಮವನ್ನು ಕಸಿದಿದೆ. ಈ ಮಹಾಮಾರಿ ಯಾವಾಗ ತೊಲಗುತ್ತದೆಂದು ಇಡೀ ಜಗತ್ತು ಕಾತರವಾಗಿದೆ. ಈ ನಡುವೆ ಈ ವರ್ಷ ಹೊಸ ಶಾಲೆಗಳು ಆರಂಭವಾಗುತ್ತಿಲ್ಲ ಎಂಬುದು ಗಮನಾರ್ಹ ಸಂಗತಿ. ಕರೊನಾದಿಂದ ಈ ವರ್ಷ ಶಾಲಾ-ಕಾಲೇಜು ಆರಂಭಕ್ಕೆ ಹೊಡೆತ ಬಿದ್ದಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ಈ ವರ್ಷ ಹೊಸ ಕಾಲೇಜುಗಳ ಆರಂಭಕ್ಕೆ ಅರ್ಜಿ ಆಹ್ವಾನಿಸುವ ಗೋಜಿಗೆ ಹೋಗಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸ ಶಾಲೆ ಆರಂಭಕ್ಕೆ ಅರ್ಜಿ ಅಹ್ವಾನಿಸಿ ವರದಿ ಪಡೆದಿದೆಯೇ ಹೊರತು ಇನ್ನೂ ಅರ್ಜಿಗಳ ಇತ್ಯರ್ಥ ಮಾಡಿಲ್ಲ. 2020-21ನೇ ಸಾಲಿನ ಶೈಕ್ಷಣಿಕ ವರ್ಷವೇ ತಲೆಕೆಳಗಾಗಿರುವುದರಿಂದ ಯಾರಿಗೂ ಯಾವ ತಿಂಗಳಿನಿಂದ ಶಾಲಾ-ಕಾಲೇಜು ಆರಂಭವಾಗಲಿದೆ ಎಂಬ ಕನಿಷ್ಠ ಅರಿವು ಇಲ್ಲದಿರುವುದರಿಂದ ಈ ವರ್ಷ ಒಂದು ವೇಳೆ ಶಾಲೆಗಳ ಆರಂಭಕ್ಕೆ ಮಾನ್ಯತೆ ಸಿಕ್ಕರೂ ನಷ್ಟವೇ ಹೆಚ್ಚು.
ಪದವಿಪೂರ್ವ ಶಿಕ್ಷಣ ಇಲಾಖೆ ಸಾಮಾನ್ಯವಾಗಿ ಜನವರಿಯಿಂದ ಫೆಬ್ರವರಿಯಲ್ಲಿ ಹೊಸ ಕಾಲೇಜು ಆರಂಭಕ್ಕೆ ಅರ್ಜಿ ಆಹ್ವಾನಿಸುತ್ತದೆ. ಇದಾದ ಬಳಿಕ ಮಾರ್ಚ್ ಅಂತ್ಯದೊಳಗೆ ಕಾಲೇಜುಗಳ ಆರಂಭಕ್ಕೆ ಮಾನ್ಯತೆ ನೀಡುತ್ತದೆ. ಇದರಿಂದ ಮಾನ್ಯತೆ ಪಡೆದ ಕಾಲೇಜುಗಳು ಜೂನ್ನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಕ್ಕೆ ಅನುಕೂಲವಾಗುತ್ತದೆ. ಇದೇ ಮಾದರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯೂ ಅನುಸರಿಸುತ್ತದೆ. ಪದವಿಪೂರ್ವ ಶಿಕ್ಷಣ ಇಲಾಖೆ 2019ರಲ್ಲಿ ಅರ್ಜಿ ಆಹ್ವಾನಿಸಿದಾಗ 435 ಅರ್ಜಿಗಳು ಬಂದಿದ್ದವು. ಈ ವೇಳೆ ಕೇವಲ 26 ಅರ್ಜಿಗಳು ಮಾತ್ರ ಪರ್ವಿುಟ್ ಪಡೆದುಕೊಳ್ಳಲು ಅರ್ಹತೆ ಹೊಂದಿದ್ದವು. ಉಳಿದ ಕಾಲೇಜುಗಳ ಅರ್ಜಿ ತಿರಸ್ಕರಿಸಲಾಗಿತ್ತು. ಈ ವೇಳೆ ದೊಡ್ಡ ಹಗರಣವೇ ನಡೆಯಿತು. ಈ ಮಧ್ಯೆ ಹೊಸ ನಿರ್ದೇಶಕರ ಆಗಮನ ಸಹ ಆಯಿತು. ಇದಾದ ಮೇಲೆ ಮಾನ್ಯತೆ ನೀಡುವ ಸಂಖ್ಯೆ 70ರ ಗಡಿ ದಾಟಿತು. ಈ ವರ್ಷ ಫೆಬ್ರವರಿ ವೇಳೆಗೆ ಕರೊನಾ ಬಂದು ಆನಂತರ ಲಾಕ್ಡೌನ್ ಪ್ರಕ್ರಿಯೆ ಆರಂಭವಾಯಿತು. ದ್ವಿತೀಯ ಪಿಯು ಪರೀಕ್ಷೆಗೆ ಚಾಲನೆ ಸಿಕ್ಕಿತು. ಸೀಮಿತ ಅವಧಿಯಲ್ಲಿ ಅರ್ಜಿ ಆಹ್ವಾನಿಸಿ ವಿಲೇವಾರಿ ಮಾಡಿ ಮಾನ್ಯತೆ ನೀಡುವುದು ಕಷ್ಟವಾಗಿದ್ದರಿಂದ 2020ನೇ ಅವಧಿಯನ್ನು ‘ಶೂನ್ಯ ವರ್ಷ’ ಎಂದು ಪರಿಗಣಿಸಲು ಇಲಾಖೆ ನಿರ್ಧರಿಸಿತು.
ಶಾಲೆಗಳ ಪರಿಸ್ಥಿತಿ
ಸಾರ್ವಜನಿಕ ಶಿಕ್ಷಣ ಇಲಾಖೆ ಡಿಸೆಂಬರ್ ಅವಧಿಯಲ್ಲೇ ಅರ್ಜಿ ಆಹ್ವಾನಿಸಿತ್ತು. ಆ ಮೇಲೆ ಎರಡು ಬಾರಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ ಫೆಬ್ರವರಿ ಅವಧಿಯವರೆಗೂ ಅವಕಾಶ ಕಲ್ಪಿಸಿತ್ತು. ಈ ವೇಳೆ ಹೊಸ ಶಾಲೆ, ಹಳೇ ಶಾಲೆ ಮಾನ್ಯತೆ ನವೀಕರಣ ಸೇರಿ 1800 ಅರ್ಜಿಗಳು ಬಂದಿದ್ದವು. ಇವುಗಳ 100 ಅರ್ಜಿಗಳನ್ನು ವಿಲೇವಾರಿ ಉಳಿದ ಅರ್ಜಿಗಳ ಕಡತವನ್ನು ಸರ್ಕಾರಕ್ಕೆ ಕಳುಹಿಸಿದೆ. ಆದರೆ, ಸದ್ಯಕ್ಕೆ ಮಾನ್ಯತೆ ನೀಡುವ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸರ್ಕಾರದಿಂದ ಸೂಚನೆ ಬಂದಿರುವುದರಿಂದ ಪ್ರಕ್ರಿಯೆ ಸ್ಥಗಿತವಾಗಿದೆ.
ಸಂಭ್ರಮಕ್ಕೆ ತಣ್ಣೀರು
ಬೇಸಿಗೆ ರಜೆಯಲ್ಲಿ ಪಾಲಕರೊಂದಿಗೆ ಪ್ರವಾಸ ತೆರಳಿ ಸಂಭ್ರಮಿಸುತ್ತಿದ್ದ ಮಕ್ಕಳು ಈ ವರ್ಷ ಮನೆ ಬಿಟ್ಟು ಹೊರ ಬರಲಾಗಲಿಲ್ಲ. ಅಲ್ಲದೆ ನೆರೆಹೊರೆಯವರೊಂದಿಗೆ ಆಡಿ-ನಲಿಯುವುದಕ್ಕೂ ಕರೊನಾ ಕಲ್ಲು ಹಾಕಿತು. ಅಲ್ಲದೆ ಬೇಸಿಗೆ ಶಿಬಿರಗಳಲ್ಲಿ ನಾಟಕ, ಚಿತ್ರಕಲೆ, ಹಾಡು, ಡ್ಯಾನ್ಸ್ ಹೀಗೆ ವಿವಿಧ ಕಲೆಗಳನ್ನು ಕಲಿಯುವ ಅವಕಾಶವನ್ನು ಕರೊನಾ ಕಸಿಯಿತು.
ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕು
ಈ ಸಾಲಿನ ಶೈಕ್ಷಣಿಕ ಚಟುವಟಿಕೆ ಯಾವಾಗ ಆರಂಭವಾಗುತ್ತದೆ ತಿಳಿಯದು. ಈ ನಡುವೆ ಕೆಲ ಖಾಸಗಿ ಶಾಲೆಗಳು ಆನ್ಲೈನ್ ಶಿಕ್ಷಣ ಆರಂಭಿಸಿದ್ದು, ಪುಟಾಣಿಗಳು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕಿದೆ. ದೊಡ್ಡ ತರಗತಿಗಳಲ್ಲಿ ಸ್ನೇಹಿತರೊಂದಿಗೆ ಕೀಟಲೇ ಮಾಡುತ್ತಾ ಕಲಿಯುತ್ತಿದ್ದ ಮಕ್ಕಳು ಈಗ ಪಾಲಕರ ಕಣ್ಗಾವಲಿನಲ್ಲಿ ಪಾಠ ಕಲಿಯಬೇಕಿದೆ.