

ಹನೂರು: ಅಗತ್ಯ ಮೂಲ ಸೌಕರ್ಯ ಒದಗಿಸದ ಪರಿಣಾಮ ಕಳೆದ 4 ದಿನಗಳಿಂದಲೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದ ಹಿನ್ನೆಲೆ ಗುರುವಾರ ಸಂಜೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಹಾಗೂ ಅಧಿಕಾರಿಗಳ ತಂಡ ತಾಲೂಕಿನ ಪೆದ್ದನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಪಾಲಕರನ್ನು ಮನವೊಲಿಸಿತು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ ಶಾಲೆಯಲ್ಲಿ 62 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯ ಹಂತವನ್ನು ತಲುಪಿದ್ದು, ಮಳೆಗಾಲದಲ್ಲಿ ನೀರು ಸೋರುತ್ತಿದೆ. ಜತೆಗೆ ಸಿಮೆಂಟ್ ತುಣುಕುಗಳು ಕಳಚಿ ಬೀಳುತ್ತಿವೆ. ಇದರಿಂದ ಮಕ್ಕಳ ಪ್ರಾಣಾಪಾಯ ತಂದೊಡ್ಡುವ ಪರಿಸ್ಥಿತಿ ಇದೆ. ಕಾಂಪೌಂಡ್ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ. ಆಟದ ಮೈದಾನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಹಾವು ಚೇಳುಗಳ ಭಯ ಆವರಿಸಿದೆ. ಇನ್ನು ಕುಡಿಯುವ ನೀರು ಹಾಗೂ ಶೌಚಗೃಹದ ಸೌಕರ್ಯವಿಲ್ಲ. ಇದಕ್ಕೆ ಕಾರಣ ಶಾಲೆಯ ಜಾಗವು ಖಾಸಗಿ ವ್ಯಕ್ತಿಗೆ ಸೇರಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಮಕ್ಕಳು ಮೂಲ ಸೌಕರ್ಯವಿಲ್ಲದೇ ತುಂಬ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿದ್ದು, ಆ.11 ರಿಂದಲೂ ಮಕ್ಕಳು ಶಾಲೆಗೆ ಗೈರಾಗಿದ್ದರು. ಇತ್ತ ಮಕ್ಕಳನ್ನು ಶಾಲೆಗೆ ಕಳುಹಿಸದೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕಾರಿಸಲಾಗವುದು ಜತೆಗೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಪಾಲಕರು ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಮೋನಾರೋತ್, ಡಿಪಿಡಿಐ ರಾಮಚಂದ್ರರಾಜೇ ಅರಸ್, ತಹಸೀಲ್ದಾರ್ ಕೆ.ಎನ್ ಚೈತ್ರಾ, ಬಿಇಒ ಗುರುಲಿಂಗಯ್ಯ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಎಸ್‌ಡಿಎ ಸಿ ಅಧ್ಯಕ್ಷ ಪರಮೇಶ್ ಹಾಗೂ ಅಧಿಕಾರಿಗಳೊಂದಿಗೆ ಕೆಲ ಕಾಲ ಚರ್ಚಿಸಿದರು. ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡದ ವಾಸ್ತವತೆಯನ್ನು ಅರಿತರು. ಅಂಗನವಾಡಿಗೂ ತೆರಳಿ ಪರಿಶೀಲಿಸಿದರು.
ಮನವೊಲಿಕೆ ಯಶಸ್ವಿ: ಬಳಿಕ ಸಿಇಒ ಅವರು ದೇಗುಲದ ಮುಂಭಾಗ ತೆರಳಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ವೇಳೆ ಪಾಲಕರು ಮಾತನಾಡಿ, ಶಾಲೆಯಲ್ಲಿ ಈ ಹಿಂದೆ 120ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದರು. ಆದರೆ ಕೊಠಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯವಿಲ್ಲದ ಪರಿಣಾಮ ಪ್ರತಿವರ್ಷ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಶಾಲೆಯ ಜಾಗವು ಗ್ರಾಮದ ಮಾರ್ಕಂಡ ಎಂಬುವರಿಗೆ ಸೇರಿದ್ದು, ಜಾಗ ನಮ್ಮದು ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಶಾಲಾ ಆವರಣದಲ್ಲಿ ಕೋಳಿ, ಮೇಕೆಗಳನ್ನು ಕಟ್ಟಲಾಗುತ್ತಿದೆ. ಹಾಗಾಗಿ ಮೂಲ ಸೌಕರ್ಯ ಕೈ ಗೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಮಕ್ಕಳು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ನ್ಯಾಯಾಲಯದಲ್ಲಿರುವ ಶಾಲೆಯ ಸಮಸ್ಯೆಯನ್ನು ಬಗೆಹರಿಸಬೇಕು. ಜತೆಗೆ ಶಾಲೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಮೋನಾರೋತ್ ಅವರು ಮಾತನಾಡಿ, ಶಾಲಾ ಜಾಗ ತಡೆಯಾಜ್ಞೆ ತೆರೆವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಸಲಾಗುವುದು. ಅಲ್ಲಿಯವರೆಗೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಶಾಲೆ ನಡೆಸಲು ಜಾಗ ನೀಡುವಂತೆ ಮನವಿ ಮಾಡಿದರು. ಈ ಸಂಬಂಧ ಸಭೆ ನಡೆಸಿ ಜಾಗ ನಿಗದಿ ಪಡಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದರು. ಹಾಗೆಯೇ ಶಾಲೆಯ ಹಳೆ ಕಟ್ಟಡದ ಮುಂಭಾಗ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಭರವಸೆ ನೀಡಿದರು. ಈ ಮೂಲಕ ಅಧಿಕಾರಿಗಳು ಭೇಟಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.