

ಸಿದ್ದಾಪುರ: ಸಿದ್ದಾಪುರ ಇಕ್ರಾ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ನಡೆದ ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು.
ಗಾಯನ, ಸಂಗೀತ, ನೃತ್ಯ, ಕರಾಟೆ ಪ್ರದರ್ಶನ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಪಾಲಕರ ಗಮನ ಸೆಳೆದವು. ಪುಟಾಣಿಗಳ ನೃತ್ಯೋತ್ಸವಕ್ಕೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಕೊಡಗಿನ ಸಂಪ್ರದಾಯ ನೃತ್ಯ ಹಾಡುಗಳಿಗೆ ವಿದ್ಯಾರ್ಥಿಗಳು, ಪಾಲಕರು ಕುಣಿದು ಕುಪ್ಪಳಿಸಿದರು.
ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರು ಉದ್ಘಾಟಿಸಿ ಮಾತನಾಡಿ, ಶಿಕ್ಷಣದಿಂದ ವಂಚಿತರಾಗದೆ ಮಕ್ಕಳ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪಿಸಲು ಪಾಲಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಉನ್ನತ ಹುದ್ದೆಯನ್ನು ಅಲಂಕರಿಸುವುದರೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಕೆ.ಯು.ಅಬ್ದುಲ್ ರಜಾಕ್ ಮಾತನಾಡಿ, ಹಲವು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. 10 ವರ್ಷಗಳಿಂದ ಶೇ.100 ಫಲಿತಾಂಶ ಬರಲು ವಿದ್ಯಾರ್ಥಿಗಳೇ ಕಾರಣರಾಗಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯವನ್ನು ರೂಪಿಸಲು ಶಿಕ್ಷಕರು ಮುಂದಾಗಿದ್ದು ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ವೆಂಕಟೇಶ್, ಇಕ್ರಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಕೆ.ಬಸೀರ್ ಹಾಜಿ, ಕಾರ್ಯದರ್ಶಿ ಕೆ.ಯು.ಅಬ್ದುಲ್ ಮಜೀದ್, ಲಯನ್ಸ್ ಅಧ್ಯಕ್ಷ ಸುನೀಲ್, ಸಿಆರ್‌ಪಿ ಅಶೋಕ್, ಪ್ರಮುಖರಾದ ರೌವೂಪ್ ಹಾಜಿ, ಸಮೀರ್, ಮಣಿ ಮಾಸ್ಟರ್ ಉಪಸ್ಥಿತರಿದ್ದರು.
ಪದವಿ ಶಿಕ್ಷಣದಲ್ಲಿ ಕೊಡಗು ಜಿಲ್ಲೆಗೆ ಕಲಾ ವಿಬಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಸಫ್ವಾನ, ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ 7ನೇ ಸ್ಥಾನ ಪಡೆದ ಅಸ್ಮಿಯ, ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಸಮ್ನಾ ಅವರನ್ನು ಸನ್ಮಾನಿಸಲಾಯಿತು.