

ಬಾಗಲಕೋಟೆ: ಬಿವಿವಿ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಈಗಾಗಲೇ ಸರ್ಕಾರದ ಅನೇಕ ಯೋಜನೆಗಳ ಅಡಿಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಸರ್ಕಾರ ಹೊಸ ಯೋಜನೆಯಾದ ಶ್ರವಣದೋಷವುಳ್ಳ ಮಕ್ಕಳ ಕಿವುಡುತನ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು. ಸರ್ಕಾರ ಮಕ್ಕಳ ಶ್ರವಣ ದೋಷ ಚಿಕಿತ್ಸಾ ಕೇಂದ್ರಕ್ಕೆ ಅನುಮತಿ ನೀಡಲಾಗುವುದು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಆರು ವರ್ಷದೊಳಗಿನ ಮಕ್ಕಳ ಕಿವುಡುತನ ಚಿಕಿತ್ಸೆಗಾಗಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲು ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸಾ ಕೇಂದ್ರವಾಗಿ ಅನುಮತಿ ನೀಡಲು ಆರೋಗ್ಯ ಇಲಾಖೆ ನಡೆಸಿದ ಪರಿವೀಕ್ಷಣೆಯಲ್ಲಿ ಕುಮಾರೇಶ್ವರ ಆಸ್ಪತ್ರೆಗೆ ಅನುಮತಿ ದೊರೆತಿದೆ. ಕುಮಾರೇಶ್ವರ ಆಸ್ಪತ್ರೆಗೆ ತೃತೀಯ ಆರೈಕೆ ಕೇಂದ್ರವೆಂದು ಅನುಮತಿ ನೀಡಲಾಗಿದೆ. ಒಂದು ಕೋಟಿ ರೂ.ವೆಚ್ಚದ ವಿವಿಧ ವೈದ್ಯಕೀಯ ಉಪಕರಣಗಳು ಅಳವಡಿಸಲಾಗುತ್ತಿದೆ ಎಂದರು.
ಕುಮಾರೇಶ್ವರ ಆಸ್ಪತ್ರೆಯಲ್ಲಿನ ಇಎನ್‌ಟಿ ವಿಭಾಗದಲ್ಲಿ ಲಭ್ಯವಿರುವ ವೈದ್ಯಕೀಯ ಉಪಕರಣಗಳು ಹಾಗೂ ತಜ್ಞ ವೈದ್ಯರನ್ನು ಗಮನಿಸಿ ಆರೋಗ್ಯ ಇಲಾಖೆ ಅನುಮತಿ ನೀಡಿದೆ. ಇನ್ನು ಮುಂದೆ ಆರು ವರ್ಷದೊಳಗಿನ ಮಕ್ಕಳ ಕಿವುಡುತನ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು. ಗಂಭೀರ ಶ್ರವಣದೋಷವುಳ್ಳ ಮಕ್ಕಳ ಕಿವುಡುತನ ಚಿಕಿತ್ಸೆಗಾಗಿ ಕಾಕ್ಲಿಯರ್ ಇಂಪ್ಲ್ಯಾಂಟ್ ಅಳವಡಿಸುವ ಈ ಯೋಜನೆ ಮಕ್ಕಳ ಕಿವುಡುತನ ನಿವಾರಣೆಯಲ್ಲಿ ಮಹತ್ವದ ವೈದ್ಯಕೀಯ ಚಿಕಿತ್ಸೆಯಾಗಿದೆ. ಕುಮಾರೇಶ್ವರ ಆಸ್ಪತ್ರೆಯಲ್ಲಿನ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳ ಪರಿಣಾಮ ಸರ್ಕಾರ ನಮ್ಮ ಆಸ್ಪತ್ರೆಗೆ ಅವಕಾಶ ನೀಡಿದೆ ಎಂದು ಹೇಳಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಎನ್.ಎನ್.ವೈದ್ಯಕೀಯ ಕಾಲೇಜ್ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ್ (ಬೇವೂರ), ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಮಹೇಶ ಕಕರೆಡ್ಡಿ ಇದ್ದರು.