ಮಕ್ಕಳ ರಕ್ಷಣಾ ಕಾಯ್ದೆ ಅನುಷ್ಠಾನಕ್ಕೆ ಕ್ರಮವಹಿಸಿ

bkt-4-2
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ಕಾಯ್ದೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ ಕೆ. ಇತರರು ಇದ್ದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಸಮರ್ಪಕ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ಕಾಯ್ದೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ರಕ್ಷಣಾ ನೀತಿ ಜಾರಿಗೆ ಬಂದು ೮ ವರ್ಷ ಕಳೆದರು ಕಾಯ್ದೆ ಮಾತ್ರ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಸರ್ಕಾರ ಮಕ್ಕಳ ರಕ್ಷಣೆಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಪರಿಣಾಮಕಾರಿ ಕೆಲಸವಾಗಬೇಕಿದೆ. ಅಂದಾಗ ಮಾತ್ರ ಕಾಯ್ದೆ ಅನುಷ್ಠಾನವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸರ್ಕಾರದ ಪ್ರತಿಯೊಂದು ಕಟ್ಟಡಗಳ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ೧೦೯೮ ಕಡ್ಡಾಯವಾಗಿ ಬರಹವಿರಬೇಕು. ಶಾಲಾ-ಕಾಲೇಜು, ವಸತಿ ನಿಲಯಗಳಲ್ಲಿ ಸಲಹಾ ಪೆಟ್ಟಿಗೆ ಇಡಬೇಕು. ಖಾಸಗಿ ಶಾಲಾ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಅಽಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ನಿಯಮಾನುಸಾರ ಇರುವ ಬಗ್ಗೆ ವರದಿ ಸಲ್ಲಿಸಬೇಕು. ವಾಹನದಲ್ಲಿ ಹೆಣ್ಣು ಮಕ್ಕಳಿದ್ದರೆ ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ವಾಹನಕ್ಕೆ ಜಿಪಿಎಸ್ ಅಳವಡಿಸಿರಬೇಕು. ಶಾಲಾ ವಾಹನ ಚಾಲಕರ ಪೊಲೀಸ್ ವೆರಿಫಿಕೇಷನ್ ಆಗಿರಬೇಕು ಎಂದರು.

ಅನಽಕೃತ ಕೋಚಿಂಗ್ ಸೆಂಟರಗಳು ಇದ್ದಲ್ಲಿ ಅವರ ಮೇಲೆ ಕಾನೂನು ಕ್ರಮವಹಿಸಬೇಕು. ಅವುಗಳ ಪಟ್ಟಿ ಇದ್ದರೆ ನೀಡುವಂತೆ ಸೂಚಿಸಿದ ಅವರು ಕೆಲವೊಂದು ಖಾಸಗಿ ಶಾಲೆಗಳು ಅನುಮತಿ ಪಡೆದಿರುವು ಬೇರೆ ತಾವು ನಡೆಸುತ್ತಿರುವ ಕ್ಲಾಸ್‌ಗಳೇ ಬೇರೆಯಾಗಿರುತ್ತದೆ. ಅಂತವುಗಳನ್ನು ಗಮನಿಸಿ ಸೂಕ್ತ ಕ್ರಮವಹಿಸಬೇಕು. ಎಲ್ಲಿ ಹೆಣ್ಣು ಮ್ಕಕ್ಕಳಿಗೆ ರಕ್ಷಣೆ ಇಲ್ಲವೋ ಅಂತಹ ಕಡೆಗಳಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಕಂಡುಬರುತ್ತವೆ. ಹಾಗಾಗದಂತೆ ನೋಡಿಕೊಳ್ಳಬೇಕಿದೆ. ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಭ್ರೂಣ ಹತ್ಯೆ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಜಿಲ್ಲೆಯಲ್ಲಿರುವ ಒಂದು ಸ್ಕ್ಯಾನಿಂಗ್ ಸೆಂಟರ್ ಭೇಟಿ ನೀಡಲಾಗಿದೆ. ಸರಿಯಾಗಿ ದಾಖಲಾತಿ ಇಟ್ಟಿರುವದಿಲ್ಲ. ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ ಪರಿಶೀಲಿಸಿ ಭ್ರೂಣ ಹತ್ಯೆ ನಡೆಯದಂತೆ ಜಾಗೃತಿ ವಹಿಸಬೇಕು.

ತಾಲೂಕಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಜಾಲಿಹಾಳ ಪ್ರಾಥಮಿಕ ಶಾಲೆ, ಬೇಲೂರು ಅಂಗನವಾಡಿ ಕೇಂದ್ರ, ಚಿಕ್ಕಮುಚ್ಚಳಗುಡ್ಡ ಮುರಾರ್ಜಿ ವಸತಿ ಶಾಲೆ ಹಾಗೂ ಯಂಕಂಚಿ ಕಸ್ತೂರಬಾ ವಸತಿ ನಿಲಯಗಳಿಗೆ ಭೇಟಿ ನೀಡಿದ್ದು, ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಆಹಾರದ ಗುಣಮಟ್ಟ, ಕುಡಿಯುವ ನೀರಿನ ಸಮಸ್ಯೆ, ಸಿ.ಸಿ ಕ್ಯಾಮರಾ ಅಳವಡಿಕೆ ಬಿಸಿ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಇದನ್ನು ಸರಿಪಡಿಸಿ ವರದಿ ಸಲ್ಲಿಸಲು ಸೂಚಿಸಿದರು.

ಅಲ್ಲದೇ ಮಕ್ಕಳ ರಕ್ಷಣಾ ನೀತಿ-೨೦೧೬, ಮಕ್ಕಳ ಸಹಾಯವಾಣಿ ಅಳವಡಿಕೆ, ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಕುರಿತು ಗೋಡೆ ಬರಹ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಮಕ್ಕಳ ಗ್ರಾಮಸಭೆ, ಮಹಿಳೆ ಮತ್ತು ಮಕ್ಕಳ ಕಾವಲು ಸಮಿತಿ ಸಭೆಗಳ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಪಡೆದು ೧೫ ದಿನಗಳಲ್ಲಿ ಎಲ್ಲಾ ಸರಿಪಡಿಸಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ ಕೆ, ಜಿಲ್ಲಾ ನಿರೂಪಣಾಧಿಕಾರಿ ಅಮರೇಶ ಎಚ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net