ಮಕ್ಕಳ ಮೇಲೆ ಒತ್ತಡ ಹೇರಬೇಡಿ

28KMD-1
Published on

ಕೆ.ಎಂ.ದೊಡ್ಡಿ: ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಪಾಲಕರು ಬಿಡಬೇಕು ಎಂದು ವೈದ್ಯ ಡಾ.ರೂಪೇಶ್ ಕಿವಿಮಾತು ಹೇಳಿದರು.

ಸಮೀಪದ ಮೆಣಸಗೆರೆ ಗ್ರಾಮದ ಜ್ಞಾನ ಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾಂಟೆಸ್ಸರಿ ಮಕ್ಕಳ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಒತ್ತಡ ಹಾಕುವುದರಿಂದ ಅವರ ಸ್ವಭಾವ ಬದಲಾವಣೆಯಾಗುತ್ತ ಅವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಸಿಂಪಡಿಸಿ ಬೆಳೆದ ಆಹಾರದಿಂದ ಮಕ್ಕಳ ಮಾನಸಿಕ ಸ್ಥಿತಿಗಳು ಸಹ ವ್ಯತ್ಯಾಸವಾಗುತ್ತಿವೆ. ಜಂಕ್ ಫುಡ್‌ಗಳು ಸಹ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು ಪಾಲಕರು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವತ್ತ ಗಮನ ಹರಿಸಬೇಕು ಎಂದರು.

ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ತಮ್ಮ ಕರ್ತವ್ಯ ಮುಗಿಯಿತು ಎಂಬುದನ್ನು ಬಿಟ್ಟು ಅವರಿಗೆ ಶಿಸ್ತಿನ ಪಾಠ ಹೇಳಿ ಕೊಡಬೇಕು. ಮಕ್ಕಳ ಮುಂದೆ ಯಾವುದೇ ರೀತಿಯ ಕೆಟ್ಟ ಪದಗಳನ್ನು ಮಾತನಾಡಬಾರದು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷೆ ಡಾ.ಸೌಮ್ಯಾ ರಾಜೇಶ್ ಮಾತನಾಡಿ, ಹಳ್ಳಿಗಾಡಿನಲ್ಲಿ ಆಧುನಿಕ ಶಿಕ್ಷಣ ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಪಾಲಕರು ಮಕ್ಕಳೊಂದಿಗೆ ಕುಳಿತು ಅವರ ಕಲಿಕೆಯನ್ನು ಹೆಚ್ಚು ಮಾಡಲು ಶಾಲೆಯಿಂದ ನೀಡುವ ಚಟುವಟಿಕೆಗಳನ್ನು ತಪ್ಪದೆ ಮಾಡಿಸಬೇಕು. ಮಾಂಟೆಸ್ಸರಿ ಮಕ್ಕಳಿಗೆ ಘಟಿಕೋತ್ಸವ ಸಮಾರಂಭವನ್ನು ಮಾಡುವುದರಿಂದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿ ಕ್ರಿಯಾಶೀಲತೆಯಿಂದ ಅಭ್ಯಾಸ ಮಾಡಲು ನೆರವಾಗುತ್ತದೆ. ಪ್ರತಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಮಕ್ಕಳು ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು. ಮೆಣಸಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್, ಸಂಸ್ಥೆಯ ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಛೇರ್ಮನ್ ಪ್ರಭಾವತಿ ಸುರೇಶ್, ಮುಖ್ಯ ಶಿಕ್ಷಕಿ ಕೆ.ಎಸ್.ಶೃತಿ, ಮಾಂಟೆಸ್ಸರಿ ಸಂಯೋಜಕಿ ಮಂಜುಳಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net