ಮಕ್ಕಳ ಬೆಳವಣಿಗೆಗೆ ಪೂರಕವಾಗಿ ನಿಲ್ಲಿ

Oplus_131072
ಲಿಟಲ್ ಸ್ಕಾಲರ್ಸ್ ಅಕಾಡೆಮಿ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಶೈನ್ ಶೆಟ್ಟಿ, ರಾಮಚಂದ್ರ, ಜೇಮ್ಸ್ ಡೊಮಿನಿಕ್, ಪೂಜಾ ಸಜೇಸ್, ಮೋಹನ್ ಕುಮಾರ್ ಇದ್ದರು.
Published on

ವಿರಾಜಪೇಟೆ: ಮಕ್ಕಳ ಧನಾತ್ಮಕ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪಾಲಕರು ಪೂರಕವಾಗಿ ನಿಲ್ಲಬೇಕು ಎಂದು ವಿರಾಜಪೇಟೆ ತಹಸೀಲ್ದಾರ್ ರಾಮಚಂದ್ರ ಹೇಳಿದರು.

ವಿರಾಜಪೇಟೆಯ ಸಂತ ಅನ್ನಮ್ಮ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ನಾನು ಇಲ್ಲಿಗೆ ಒಬ್ಬ ಅಧಿಕಾರಿಯಾಗಿ ಬಂದಿಲ್ಲ. ಬದಲಾಗಿ ಪಾಲಕನ ರೀತಿಯಲ್ಲಿ ಬಂದಿದ್ದೇನೆ. ಶಾಲೆಯ ವಾರ್ಷಿಕೋತ್ಸವ ಎನ್ನುವುದು ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರ ಜೀವನದ ಅವೀಸ್ಮರಣೆಯ ದಿನ. ಮಕ್ಕಳು ಪಠ್ಯಹಾಗೂ ಪಠ್ಯೇತರ ಪ್ರತಿಭೆ ಪಾಲಕರ ಮುಂದೆ ಪ್ರದರ್ಶನಗೊಳ್ಳುವ ಇಂತಹ ದಿನ ನಿಜವಾಗಿ ವಿದ್ಯಾರ್ಥಿ ಜೀವನದ ಮಹತ್ವವಾಗಿರುತ್ತದೆ. ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ. ಬದಲಾಗಿ ಶಿಕ್ಷಣದೊಂದಿಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪಾಲಕರು ಸಹ ಪೂರಕವಾಗಿ ಶ್ರಮಿಸಬೇಕೆಂದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಕ್ರಿಯಾಶೀಲತೆಯೊಂದಿಗೆ ಭಾಗವಹಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಶೈಕ್ಷಣಿಕ ಮಾತ್ರವಲ್ಲ ಶೈಕ್ಷಣಿಕೇತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಿ ಪ್ರಾಯೋಗಿಕವಾಗಿ ಕಲಿಸಲಾಗುತ್ತಿದೆ. ಈ ಸಂಸ್ಥೆಯು ರವೀಂದ್ರನಾಥ ಟ್ಯಾಗೋರ್ ಪರಿಕಲ್ಪನೆಯಂತೆ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಎರಡೂ ಕ್ಷೇತ್ರದಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಈ ರೀತಿಯ ಶಿಕ್ಷಣ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವುದರ ಜತೆಗೆ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದರು.

ಬಿಗ್‌ಬಾಸ್ ಖ್ಯಾತಿಯ ನಟ ಶೈನ್‌ಶೆಟ್ಟಿ ಮಾತನಾಡಿ, ಈ ಸಂಸ್ಥೆಯು ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಕೆಲಸವನ್ನು ಮಾಡುತ್ತಿದೆ. ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಈ ಶಿಕ್ಷಣ ಸಂಸ್ಥೆ ಶಿಕ್ಷಣ ಮಾತ್ರ ನೀಡುತ್ತಿಲ್ಲ. ಅದರೊಂದಿಗೆ ವಿದ್ಯಾರ್ಥಿಗಳಿಗೆ ಇತರ ಜ್ಞಾನವನ್ನು ಹಂಚುವ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ. ವಿದ್ಯಾರ್ಥಿಗಳೊಂದಿಗೆ ಸೇರಿ ಸಂಸ್ಥೆಯ ಮುಖ್ಯಸ್ಥರಾದ ಪೂಜಾ ಅವರು ವಿವಿಧ ಕಡೆಗಳಲ್ಲಿ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ಮುಖ್ಯಸ್ಥರಾದ ಪೂಜಾ ಸಜೇಶ್ ಮಾತನಾಡಿ, ಇದೊಂದು ವಿದ್ಯಾರ್ಥಿಗಳನ್ನು ಪಾಲಕರನ್ನು ಒಗ್ಗೂಡಿಸುವ ಒಂದು ಸಮಾರಂಭವಾಗಿದ್ದು, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಾತ್ರ ಮಹತ್ವವನ್ನು ನೀಡದೆ ಶಿಕ್ಷಣದೊಂದಿಗೆ ಜೀವನದ ಮೌಲ್ಯ, ಕ್ರೀಡೆ, ಸಂಗೀತ, ಕರಾಟೆಗಳಂತಹ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿ ಮಾಡುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸುವ ಪ್ರಜೆಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ರೆ.ಪಾ. ಜೇಮ್ಸ್ ಡೊಮಿನಿಕ್, ಮಹಮ್ಮದ್ ರಫಿ, ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಸಿಆರ್‌ಪಿಗಳಾದ ಸಿಂಧು, ಸುಷ್ಮಾ, ಲಿಟಲ್ ಸ್ಕಾಲರ್ ಅಕಾಡೆಮಿಯ ಮುಖ್ಯಶಿಕ್ಷಕಿ ಮೀರಾ ಪೂಣಚ್ಚ, ಚೊಂದಮ್ಮ ಪ್ರದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಐಕ್ಯಂ ಎಂಬ ವಿಷಯಾಧಾರಿತವಾದ ವಿಶೇಷ ನೃತ್ಯವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲಕರು ಲಿಟಲ್ ಸ್ಕಾಲರ್ಸ್ ಅಕಾಡೆಮಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net