ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

Published on

ಶ್ರೀರಂಗಪಟ್ಟಣ: ರಾಜ್ಯ ಕಾಂಗ್ರೆಸ್ ಸರ್ಕಾರ ಪದೇಪದೆ ಮದ್ಯದ ಬೆಲೆ ಏರಿಕೆ ಮಾಡಿ ಬಡ ಹಾಗೂ ಮಧ್ಯಮ ವರ್ಗದ ಮದ್ಯ ಪ್ರಿಯರನ್ನು ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿದ್ದು, ದರ ಏರಿಕೆ ಕಡಿತಗೊಳಿಸಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.

ಪಟ್ಟಣದ ಅಬಕಾರಿ ಇಲಾಖೆಯ ಕಚೇರಿ ಮುಂಭಾಗ ಬುಧವಾರ ಮರವೇ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಮದ್ಯದ ಖಾಲಿ ಬಾಟಲಿಗಳು ಹಾಗೂ ಮದ್ಯವನ್ನು ಸುರಿದು ‘ಎಣ್ಣೆ ಬಿಡಿ ಎಳನೀರು ಕುಡಿ’ ಎಂಬ ಘೋಷ ವಾಕ್ಯದೊಂದಿಗೆ ಆಕ್ರೋಶದಿಂದ ಘೋಷಣೆ ಕೂಗುವ ಮೂಲಕ ಪ್ರತಿಭಟನಾ ಧರಣಿ ನಡೆಸಿದರು.

ಅಧ್ಯಕ್ಷ ಬಿ.ಶಂಕರ್‌ಬಾಬು ಮಾತನಾಡಿ, ರಾಜ್ಯದಲ್ಲಿ ಮದ್ಯಪ್ರಿಯರು ಅಧಿಕವಾಗಿದ್ದು, ರಾಜ್ಯ ಸರ್ಕಾರ ದರ ಅಧಿಕವಾಗಿ ಏರಿಸಿರುವ ನಡೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಕೂಲಿ ಮಾಡಿ ದುಡಿದ ಹಣವನ್ನೆಲ್ಲ ತಮ್ಮ ಕುಡಿತದ ಚಟಕ್ಕೆ ತಂದು ಸುರಿಯುತ್ತಿದ್ದು, ಅವರ ಕುಟುಂಬಗಳ ಸದಸ್ಯರು ಆರ್ಥಿಕ ಸಮಸ್ಯೆಗೆ ಸಿಲುಕಿ ಮನೆ ನಿರ್ವಹಣೆ ಮಾಡಲು ಪರದಾಡುತ್ತಿದ್ದಾರೆ. ಇನ್ನು ಕೆಲವರು ಕಡಿಮೆ ವೆಚ್ಚದಲ್ಲಿ ಕಳಪೆ ಸಾರಾಯಿ ಕುಡಿದು ಅನಾರೋಗ್ಯಕ್ಕೆ ಒಳಗಾಗಿ ಮೃತಪಡುತ್ತಿದ್ದಾರೆ. ಇಂತಹ ಪ್ರಕರಣ ತಗ್ಗಿಸಲು ಗುಣಮಟ್ಟದ ಮದ್ಯ ಖರೀದಿಸಿ ಸೇವಿಸಲು ಬೆಲೆಯಲ್ಲಿ ವಿನಾಯಿತಿ ನೀಡಬೇಕು. ಪ್ರಮುಖವಾಗಿ ಕುಡಿದ ಮದ್ಯದ ಬಾಟಲಿಗಳು ಹಾಗೂ ಪೌಚ್‌ಗಳನ್ನು ಜನರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಹಾಗೂ ಜನರು, ಮುಗ್ಧ ಪ್ರಾಣಿ ಮತ್ತು ಜೀವಸಂಕುಲಕ್ಕೆ ತೊಡಕಾಗಿದೆ. ರಾಜ್ಯ ಸರ್ಕಾರ ಗಾಜಿನ ಬಾಟಲಿಗಳನ್ನು ಮರು ಬಳಕೆಗೆ ಅವಕಾಶ ಕಲ್ಪಿಸಿ ಒಂದೆಡೆ ಸಂಗ್ರಹಿಸುವ ವ್ಯವಸ್ಥೆಗೆ ಕಾನೂನು ರೂಪಿಸಬೇಕು. ಇಲ್ಲವಾದಲ್ಲಿ ಈ ಎಲ್ಲ ಬೇಡಿಕೆಗಳ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು

ಬಳಿಕ ವಿವಿಧ ಬೇಡಿಕೆಗಳಿರುವ ಮನವಿ ಪತ್ರವನ್ನು ಅಬಕಾರಿ ಉಪನೀರಿಕ್ಷಕ ಬಿ.ಶಿವಣ್ಣ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ರವಾನಿಸಿದರು. ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಪದಾಧಿಕಾರಿಗಳಾದ ಛಾಯಾದೇವಿ, ಜಯಮ್ಮ, ಮನೋಜ್, ಧನುಷ್, ಮಂಜುನಾಥ್, ಸುವರ್ಣ, ಮುದ್ದಮ್ಮ, ಕಲ್ಯಾಣಮ್ಮ, ಮಂಗಳಮ್ಮ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net