

ಸಿದ್ದಾಪುರ: ತಾಲೂಕಿನ ಜಾನ್ಮನೆ ಅರಣ್ಯ ವಿಭಾಗದ ನಿಲ್ಕುಂದ ಸಮೀಪದ ಹಳ್ಳಿಬೈಲ್ ಅರಣ್ಯದಲ್ಲಿ 15 ಮಂಗಗಳನ್ನು ಯಾರೋ ದುಷ್ಕರ್ವಿುಗಳು ಸಾಯಿಸಿ ಚೀಲದಲ್ಲಿ ತುಂಬಿಕೊಂಡು ಬಂದು ಎಸೆದಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನಿಲ್ಕುಂದ ಸಮೀಪದ ಹಳ್ಳಿಬೈಲ್ ಅರಣ್ಯದಲ್ಲಿ ಏ. 17ರಂದು ಎಲ್ಲಿಂದಲೋ ಸತ್ತ ಮಂಗಗಳನ್ನು ಸಾಯಿಸಿ ಗೋಣಿಚೀಲದಲ್ಲಿ ತುಂಬಿಕೊಂಡು ಬಂದು ಇಲ್ಲಿ ಬೀಸಾಡಿದ್ದಾರೆ. ಇದನ್ನು ಏ. 18ರಂದು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಲ್ಲದೇ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ತಂದು ಎಸೆದವರು ಯಾರು?: ಕರೊನಾ ಲಾಕ್ ಡೌನ್ ಇರುವ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ ಇಲ್ಲದಿದ್ದರೂ ಇಲ್ಲಿ ತಂದು ಬಿಟ್ಟವರು ಯಾರು ಎನ್ನುವ ಹುಟ್ಟಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚು ಗಮನ ನೀಡಬೇಕು. ತಪ್ಪಿತಸ್ಥರನ್ನು ಹಿಡಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಳ್ಳಿಬೈಲ್ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ಸತ್ತಿರುವ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮಂಗಗಳ ದೇಹದ ಭಾಗವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿ ಯಾರು ಸತ್ತ ಮಂಗಗಳನ್ನು ತಂದು ಹಾಕಿದ್ದಾರೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಯಾರೇ ಆದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. | ರಘು ಎಸಿಎಫ್ ಶಿರಸಿ
ಕಾಗೆಗಳ ಅಸಹಜ ಸಾವು: ಹೆಗ್ಗರಣಿ ಹಾಗೂ ಕ್ಯಾದಗಿ ಸಮೀಪದ ದಾಸನಗದ್ದೆಯಲ್ಲಿ ಹಲವು ಕಾಗೆಗಳು ಸಾವನ್ನಪ್ಪಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಏಳೆಂಟು ದಿನದ ಹಿಂದೆ ಮೂರ್ನಾಲ್ಕು ದಿನದಲ್ಲಿ ಹೆಗ್ಗರಣಿ ಸುತ್ತಮುತ್ತ ಹದಿನೈದಕ್ಕೂ ಹೆಚ್ಚು ಕಾಗೆ ಹಾಗೂ ಅದೇ ಸಂದರ್ಭದಲ್ಲಿ ಕಾಕತಾಳಿಯ ಎನ್ನುವಂತೆ ಕ್ಯಾದಗಿ ಸಮೀಪದ ದಾಸನಗದ್ದೆಯಲ್ಲಿ 8 ಕಾಗೆಗಳು ಒಂದೇ ದಿನ ಸಾವನ್ನಪ್ಪಿದೆ.
ಹೆಗ್ಗರಣಿ ಸುತ್ತಮುತ್ತ ಸತ್ತ ಕಾಗೆಗಳನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿ ನಂತರ ಅವರು ವನ್ಯ ಜೀವಿ ತಜ್ಞರನ್ನು ಕರೆಸಿ ಸತ್ತ ಕಾಗೆಗಳ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಯಾವ ಕಾರಣದಿಂದ ಕಾಗೆಗಳು ಸತ್ತಿದೆ ಎಂದು ತಿಳಿಯಲಿದೆ. ಸತ್ತ ಕಾಗೆಗಳನ್ನು ಹುಗಿಯಲಾಗಿದೆ ಎಂದು ಜಾನ್ಮನೆ ಆರ್ಎಫ್ಒ ಪವಿತ್ರಾ ತಿಳಿಸಿದ್ದಾರೆ.
ದಾಸನಗದ್ದೆಯಲ್ಲಿ ಸತ್ತ ಕಾಗೆಗಳು ಜನರಿಗೆ ಕಂಡು ಬಂದಿದ್ದೆ ಐದಾರು ದಿನದ ನಂತರ ಆಗಿರುವುದರಿಂದ ತಜ್ಞರು ಪರಿಶೀಲಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ ಸತ್ತ ಕಾಗೆಗಳನ್ನು ಹುಗಿಯಲಾಗಿದೆ ಎಂದು ಕ್ಯಾದಗಿ ವಲಯ ಅರಣ್ಯ ವ್ಯಾಪ್ಯಿಯ ಉಪವಲಯ ಅರಣ್ಯಾಧಿಕಾರಿ ಅಶೋಕ ಮಾಹಿತಿ ನೀಡಿದ್ದಾರೆ.