ಮ.ಬೆಟ್ಟದಲ್ಲಿ ಭಕ್ತರಿಗೆ ಮುದ್ದೆ, ಉಪ್ಸಾರು ಪ್ರಸಾದ

25 HANUR 3
Published on

ಹನೂರು: ಮಹಾಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಮಂಗಳವಾರ ಕನಕಪುರ ಭಕ್ತರು ಆಯೋಜಿಸಿದ್ದ ಮುದ್ದೆ, ಉಪ್ಸಾರು ಪ್ರಸಾದ ವಿನಿಯೋಗ ಕಾರ್ಯದಲ್ಲಿ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭಾಗಿಯಾಗಿದ್ದರು.

ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇಶದ ಧಾರ್ಮಿಕ ಇತಿಹಾಸವನ್ನು ಅವಲೋಕಿಸಿದಾಗ ಮಠಗಳು ಪ್ರಾಚೀನ ಕಾಲದಿಂದಲೂ ತನ್ನದೇಯಾದ ವೈಶಿಷತೆಯನ್ನು ಹೊಂದಿದೆ. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಶರಣರ ಕಾಯಕ, ದಾಸೋಹ ಕಲ್ಪನೆಯಿಂದ ಮಠಗಳು ಪ್ರಜ್ಜಲಿಸಲು ಆರಂಭಿಸಿದವು. 20ನೇ ಶತಮಾನದಲ್ಲಿ ಕಾಯಕದ ಜತೆಗೆ ಶೈಕ್ಷಣಿಕ ಕ್ರಾಂತಿಗೂ ಅಡಿಗಲ್ಲು ಹಾಕಿದವು. ಈ ದೆಸೆಯಲ್ಲಿ ನಾಡಿನಲ್ಲಿ ಕಾಯಕ, ದಾಸೋಹ ಹಾಗೂ ಶೈಕ್ಷಣಿಕ ಪರಂಪರೆಯಲ್ಲಿ ಶ್ರೀಸಾಲೂರು ಬೃಹನ್ಮಠವು ಒಂದಾಗಿದ್ದು, ನಿರಂತರವಾಗಿ ದಾಸೋಹ ನಡೆಸಿಕೊಂಡು ಬರಲಾಗುತ್ತಿದ್ದು, ಹಸಿವು ನೀಗಿಸುವ ಕಣಜವಾಗಿವೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಈಗಾಗಲೇ ವಿಶೇಷ ದಾಸೋಹವನ್ನು ಆಯೋಜಿಸಲಾಗಿದೆ.

ಇದೀಗ ಕನಕಪುರದ ಭಕ್ತರಿಂದ ಮಾದಪ್ಪನಿಗೆ ಪ್ರಿಯವಾದ ಮುದ್ದೆ, ಉಪ್ಸಾರು ಪ್ರಸಾದದ ವ್ಯವಸ್ಥೆ ಮಾಡಿರುವುದು ಪುಣ್ಯದ ಕೆಲಸ. ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಗಳು ಹೆಚ್ಚಾಗಬೇಕು ಎಂದು ತಿಳಿಸಿದರು.

ಇದಕ್ಕೂ ಮೊದಲು ಶ್ರೀಗಳು ಮುದ್ದೆ ಸಿದ್ಧಪಡಿಸುವ ಹಾಗೂ ಭಕ್ತರಿಗೆ ಉಣಬಡಿಸುವ ಕಾಯಕದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಠದ ಸದ್ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net