ಮ.ಬೆಟ್ಟದಲ್ಲಿ ದಲಿತ ಒಕ್ಕೂಟದಿಂದ ಧರಣಿ

24 HANUR 4
Published on

ಹನೂರು: ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತಪರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.

ಮಾದಪ್ಪನ ಸನ್ನಿಧಿ ಮುಂಭಾಗದ ಪಾರ್ಕಿಂಗ್ ಬಳಿ ಜಮಾಯಿಸಿದ ಪದಾಧಿಕಾರಿಗಳು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಬ್ಯಾಂಕ್ ವೃತ್ತದ ಮೂಲಕ ಬಸ್ ನಿಲ್ದಾಣದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಮಿತ್ ಷಾ ಅವರು ಸಂವಿಧಾನದ ಅಡಿಯಲ್ಲಿ ಗೃಹಮಂತ್ರಿಯಾಗಿದ್ದು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ, ಸಂವಿಧಾನದ ಬಗ್ಗೆ ಗೌರವವಿಲ್ಲ. ದೇಶಕ್ಕೆ ಸಂವಿಧಾನ ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಸಂಸತ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದು ನಿಜಕ್ಕೂ ಖಂಡನೀಯ. ಇಂತಹವರಿಗೆ ಶಿಕ್ಷೆಯಾಗಬೇಕು. ದೇಶದ್ರೋಹದಡಿ ಗಡಿಪಾರು ಮಾಡಬೇಕು. ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಪಿಡಿಒ ಕಿರಣ್ ಅವರಿಗೆ ಮನವಿ ಸಲ್ಲಿಸಿದರು. ದಸಂಸ ಜಿಲ್ಲಾ ಸಂಚಾಲಕ ದೊರೆಸ್ವಾಮಿ, ಅಂಬೇಡ್ಕರ್ ಸಂಘದ ಕಾರ್ಯದರ್ಶಿ ವಿಜಯಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ, ಮುಖಂಡರಾದ ಗೋಪಾಲ್, ಕುಮಾರ್, ಮುರುಗೇಶ್, ಚಿನ್ನಸ್ವಾಮಿ, ಶಿವಕುಮಾರ್, ಉಮೇಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net