

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ 2 ಸಾವಿರಕ್ಕೂ ಹೆಚ್ಚು ಭಕ್ತರು 15ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡು ದೇವರ ದರ್ಶನ ಪಡೆದು ವಿವಿಧ ಸೇವೆಗಳಲ್ಲಿ ಭಾಗಿಯಾಗಿದ್ದರು.
ಮ.ಬೆಟ್ಟದಲ್ಲಿ ಹೆಣ್ಣು ಮಕ್ಕಳಿಗೆ ದೇವರ ದರ್ಶನ ಪಡೆಯಲು ಕಾರಣರಾದ ಶರಣ ಸಂತತಿಯ ಎಣ್ಣೆಮಜ್ಜನ ಸೇವಾ ಕರ್ತೃ ಮೂಗಪ್ಪ-ರಾಮವ್ವ ತಾಯಿಯ ವಂಶಿಕರಾದ ಸಿದ್ದಪ್ಪಸ್ವಾಮಿ ಅವರು ಹಿಂದಿನಿಂದಲೂ ಮ.ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದು, ಮಾದಪ್ಪನು ನೆಲೆಯೂರಿದ್ದ ಸಿಂಗಾನಲ್ಲೂರಿನ ಶ್ರೀಕಟ್ಟೆ ಬಸವೇಶ್ವರ ಸ್ವಾಮಿಗೆ ಪ್ರಥಮ ಪೂಜೆಯನ್ನು ಸಲ್ಲಿಸಿ ಶ್ರೀಕ್ಷೇತ್ರಕ್ಕೆ ತೆರಳುವುದು ವಾಡಿಕೆ. ಅದರಂತೆಯೇ ಗೆಜ್ಜಲಗೆರೆ ಗ್ರಾಮಸ್ಥರು 15ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದರು. ಸಿಂಗಾನಲ್ಲೂರಿನಲ್ಲಿ ಪ್ರಥಮ ಪೂಜೆಯನ್ನು ಸಲ್ಲಿಸಿದರು. ತಾಳುಬೆಟ್ಟದಲ್ಲಿ ತಂಗಿದ್ದು, ಮುದ್ದೆ, ಅವರೆಕಾಳು ಸಾಂಬಾರು, ಕುಂಬಳಕಾಯಿ ಗೊಜ್ಜು, ತರಕಾರಿ ಪಲ್ಯ, ಅನ್ನ, ಪಾಯಸ, ಕಜ್ಜಾಯ ಹಾಗೂ ಮಜ್ಜಿಗೆಯನ್ನು ಉಣ ಬಡಿಸಲಾಗಿತ್ತು.
ಸೋಮವಾರ ಮ.ಬೆಟ್ಟಕ್ಕೆ ತೆರಳಿದ ಗ್ರಾಮಸ್ಥರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ಚಿನ್ನದ ತೇರು, ಬೆಳ್ಳಿ ತೇರಿನ ಉತ್ಸವದಲ್ಲಿ ಭಾಗಿಯಾಗಿದ್ದರಲ್ಲದೆ, ಇನ್ನು ಕೆಲವರು ಹುಲಿ, ಬಸವ ಹಾಗೂ ರುದ್ರಾಕ್ಷಿ ಸೇವಾ ಉತ್ಸಾವಾದಿಗಳಲ್ಲಿ ಪಾಲ್ಗೊಂಡಿದ್ದರು.