

ಬಾಗಲಕೋಟೆ: ಮುಡಾ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಽಸಿದಂತೆ ಸಿಎಂ ರಾಜೀನಾಮೆಗೆ ವಿಪಕ್ಷಗಳ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಹಿಂದುಳಿದ ವರ್ಗದ ವ್ಯಕ್ತಿ ೨ನೇ ಸಲ ಸಿಎಂ ಆಗಿದ್ದಕ್ಕೆ ಬಿಜೆಪಿಗೆ ಹೊಟ್ಟೆ ಉರಿ ಎಂದು ಜಾತಿಯ ಅಸö ಪ್ರಯೋಗಕ್ಕೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ತಿರುಗೇಟು ಕೊಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಶೆಟ್ಟರ್, ಈ ಭ್ರಷ್ಟಾಚಾರದ ವಿಚಾರದಲ್ಲಿ ಜಾತಿ ಸಮೀಕರಣ ತರಲೇಬಾರದು. ಹಗರಣಕ್ಕೂ ಜಾತಿ, ಗೀತಿಗೂ ಯಾವುದೇ ಸಂಬಂಧ ಇಲ್ಲ. ಆದರೆ, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಲೇಬಲ್ ಹಾಕಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರ ಮುಚ್ಚಿಹಾಕಲು ಯಾವುದೇ ಹಿಂದುಳಿದ ವರ್ಗದ ಲೇಬಲ್ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ. ಇದೀಗ ತಮ್ಮ ಮೇಲೆ ಆಪಾದನೆ ಬಂದಿದೆ ಎಂದು ಜನರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಜನರು ಇದನ್ನು ನಂಬುವುದಿಲ್ಲ. ಈಗಾಗಲೇ ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಮುಖ ಹೊರಗೆ ಬಂದಾಗಿದೆ ಎಂದರು.
ಇಷ್ಟೆಲ್ಲ ಹೇಳುವ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದಿಂದ ಬಂದವರು ಎನ್ನುವುದು ಗೊತ್ತಿಲ್ಲವೆ? ಅವರನ್ನು ಇಳಿಸಲಿಕ್ಕೆ, ಮತ್ತೆ ಪ್ರಧಾನಿ ಆಗಬಾರದೆಂದು ರಾಹುಲ್ ಗಾಂಧಿ ಸೇರಿ ಇಡೀ ಕಾಂಗ್ರೆಸ್ ಹೋರಾಟ ಮಾಡಲಿಲ್ಲವೆ? ಅಷ್ಟೆ ಅಲ್ಲದೇ ಇದೇ ಕಾಂಗ್ರೆಸ್ ಪಕ್ಷ ಸಂಸತ್ ನಲ್ಲಿ ಮೋದಿ ಅವರಿಗೆ ಎಷ್ಟೊಂದು ಟ್ವಿಂಗಲ್ ಮಾಡಿದರು. ಹಿಂದುಳಿದ ವರ್ಗದ ಪ್ರಧಾನಿಗೆ ನೀವು ಅಪಮಾನ ಮಾಡುತ್ತೀರಿ. ಇಲ್ಲಿ ನಿಮ್ಮ ವಿರುದ್ಧ ಭ್ರಷ್ಟಾಚಾರದ ಆಪಾದನೆ ಬಂದಾಗ ಹಿಂದುಳಿದ ವರ್ಗದ ಲೇಬಲ್ ಹಾಕಿಕೊಳ್ಳುತ್ತೀರಾ ಎಂದು ತಿರುಗೇಟು ಕೊಟ್ಟರು.
ಮುಡಾ ಹಗರಣದಲ್ಲಿ ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದೆ. ನಾನು ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ತಮ್ಮ ಮೇಲೆ ಯಾವುದೇ ಭ್ರಷ್ಟಾಚಾರ ಇಲ್ಲ, ಕಪ್ಪು ಇಲ್ಲ ಎಂದು ಹೇಳಿಕೊಂಡು ಬಂದಿದ್ದರಲ್ಲ. ಈಗ ಅವರ ಬಣ್ಣ ಬಯಲಾಗಿದೆ ಎಂದು ಛೇಡಿಸಿದರು.
ಕೇವಲ ಹತ್ತು ಕೋಟಿ ರೂ. ಬಿಡುಗಡೆ ಮಾಡಿಸಲು ಹತ್ತಾರು ಸಲ ಹಣಕಾಸು ಇಲಾಖೆಗೆ ನಾನು ಅಲೆದಾಡಿದ್ದೇನೆ. ಅಂತದ್ದರಲ್ಲಿ ನೂರಾರು ಕೋಟಿ ರೂ. ಹಣ ಬಿಡುಗಡೆ ಆಗುತ್ತದೆ, ಹಣಕಾಸು ಇಲಾಖೆ ಕೈಕಟ್ಟಿ ಕೂಡುತ್ತದೆ ಎಂದರೆ ಇದರಲ್ಲಿ ನಿಮ್ಮ ಭಾಗವಹಿಸುವಿಕೆ ಇರುತ್ತದೆ. ಅವರು(ಸಿದ್ದರಾಮಯ್ಯ) ಬಂಡತನದ ರಾಜಕಾರಣ ಮಾಇದರೆ ಯಾರು ಏನು ಮಾಡಬೇಕು? ಅದಕ್ಕಾಗಿಯೇ ನಾವು ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸುತ್ತಿದ್ದೇವೆ. ಇಡಿ ಬಂದ ಮೇಲೆ ಹೊಸ ವಿಚಾರಗಳು ಹೊರಕ್ಕೆ ಬರುತ್ತಿವೆ. ಸಿಬಿಐ ತನಿಖೆ ನಡೆದರೆ ಸಿದ್ದರಾಮಯ್ಯ ಬಣ್ಣ ಬಯಲಾಗುತ್ತದೆ. ಅವರು ಏನೇ ಮಾಡಿದರೂ ಈ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಪಕ್ಷ ಹೋರಾಟ ಮುಂದುವರೆಸುತ್ತದೆ ಎಂದರು.