

ಅರಸೀಕೆರೆ: ಭ್ರಷ್ಟಾಚಾರ ನಿರ್ಮೂಲನೆಗೆ ಯುವ ಸಮುದಾಯ ಪಣತೊಡಬೇಕು ಎಂದು ಹೊಯ್ಸಳೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಎ.ಎಸ್.ವಸಂತಕುಮಾರ್ ಸಲಹೆ ನೀಡಿದರು.
ಹಾಸನದ ಕೃಷ್ಣ ಕಾನೂನು ಕಾಲೇಜು ವತಿಯಿಂದ ಇತ್ತೀಚೆಗೆ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಇಲಾಖೆಗಳಲ್ಲಿ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಮಹತ್ತರ ಬದಲಾವಣೆ ತರುವ ದೃಷ್ಟಿಯಿಂದ ಲೋಕಾಯುಕ್ತ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಉನ್ನತ ವ್ಯಾಸಂಗದ ನಂತರ ಸರ್ಕಾರಿ ಸೇವೆಗೆ ಸೇರಿಕೊಳ್ಳುವವರು ಲಂಚ ಪಡೆಯುವುದಿಲ್ಲ ಎನ್ನುವ ಸಂಕಲ್ಪ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯ ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.
ಉಪನ್ಯಾಸಕರಾದ ಆರ್.ಮಂಜುನಾಥ್, ಎಚ್.ಡಿ.ಉಮೇಶ್ ವಿಶೇಷ ಉಪನ್ಯಾಸ ನೀಡಿದರು.
ಉಪನ್ಯಾಸಕರಾದ ಎಸ್.ಅಯೂಬ್‌ಖಾನ್, ಯಶ್ವಂತ್, ಜಿ.ಆರ್.ವಿಶ್ವನಾಥ್, ಎಚ್.ಡಿ.ಉಷಾ, ಯಶಸ್ವಿನಿ, ವರ್ಷಾಜೈನ್ ಇತರರಿದ್ದರು.