

ಮದ್ದೂರು: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಒಂದು ಉಜ್ವಲ ಅಧ್ಯಾಯ. ಇಂದಿನ ಯುವಜನತೆ ಸ್ವಾತಂತ್ರ್ಯ ಚಳವಳಿಯ ಬಗ್ಗೆ ತಿಳಿದುಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಸಲಹೆ ನೀಡಿದರು.
ಕ್ವಿಟ್ ಇಂಡಿಯಾ ಚಳವಳಿ ದಿನಾಚರಣೆ ಪ್ರಯುಕ್ತ ತಾಲೂಕು ಆಡಳಿತದ ವತಿಯಿಂದ ಬುಧವಾರ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದರ ಫಲವಾಗಿ ನಾವು ಸ್ವಾತಂತ್ರ್ಯಗೊಂಡೆವು. ಸ್ವಾತಂತ್ರ್ಯ ಪಡೆದು ಏಳು ದಶಕಗಳಾದರೂ ಭಾರತ ಇಂದಿಗೂ ಅಪರಾಧ, ಭ್ರಷ್ಟಾಚಾರ, ಬಡತನ, ಅನಕ್ಷರತೆ, ನಿರುದ್ಯೋಗ, ಮೂಢನಂಬಿಕೆಯಂತಹ ಸಮಸ್ಯೆಗಳ ಜತೆ ಸೆಣಸುತ್ತಿರುವುದು ವಿಪರ್ಯಾಸ. ಆದ್ದರಿಂದ, ಯುವಜನತೆ ಒಗ್ಗಟ್ಟಿನಿಂದ ಈ ಸಮಸ್ಯೆಗಳಿಗೆ ಮುಕ್ತಿ ಹಾಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ ಎಂದರು.
ಗ್ರೇಡ್-2 ತಹಸೀಲ್ದಾರ್ ಜಿ.ಎಂ.ಸೋಮಶೇಖರ್ ಮಾತನಾಡಿ, ದೇಶವನ್ನು ಬ್ರಿಟಿಷರ ಸಂಕೋಲೆಯಿಂದ ಮುಕ್ತಗೊಳಿಸಲು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ ಮಹನೀಯರು, ಮಹಿಳೆಯರನ್ನು ಸ್ಮರಿಸಬೇಕಿದೆ ಎಂದರು.
ಶಾಂತಾ ಚಂದು, ಸಿ.ಅಪೂರ್ವ ಚಂದು, ಕಂದಾಯ ಇಲಾಖೆ ಸಿಬ್ಬಂದಿ ರವಿಶಂಕರ್, ನವೀನ್, ವೆಂಕಟೇಶ್, ಮಂಜುನಾಥ್, ಚಂದ್ರಶೇಖರ್, ಮಹೇಂದ್ರ ಇದ್ದರು.