ಭೋಗಿ, ತ್ಯಾಗಿ ಮಹಾಯೋಗಿ ವೇಮನ

bkt-19-1
ನವನಗರದ ಪ್ರಮುಖ ಬೀದಿಗಳಲ್ಲಿ ಮಹಾಯೋಗಿ ವೇಮನರ ಭಾವಚಿತ್ರದ ಮೆರವಣಿಗೆ ಜರುಗಿತು.
Published on

ಬಾಗಲಕೋಟೆ: ೧೭ನೇ ಶತಮಾನದಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ವೇಮನ ವಿಲಾಸ ಜೀವನ ನಡೆಸಿ ಭೋಗಿಯಾಗಿ, ಎಲ್ಲ ಅಳಿದು ತ್ಯಾಗಿಯಾಗಿ ಮಹಾಯೋಗಿಯಾದ ಎಂದು ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಹೇಳಿದರು.
ನವನಗರದ ಅಂಬೇಡ್ಕರ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದರು.
ಅನೇಕ ಜನ ಸಂತ, ಯೋಗಿ, ಯತಿಗಳ ಈ ನಾಡು, ದೇಶವನ್ನು ಪಾವನ ಮಾಡಿದ್ದು, ತಮ್ಮದೇ ಆದ ತತ್ವಾದರ್ಶಗಳನ್ನು ಜನರಿಗೆ ತಲುಪಿಸಿ ಸುಂದರ ಸಮಾಜ ನಿರ್ಮಿಸುವಲ್ಲಿ ಪ್ರಮುಖರಾದವರು ಎಂದರು.
ವರ್ಗರಹಿತ, ಜಾತಿರಹಿತ ಸಮಾಜ ಕಟ್ಟುವಲ್ಲಿ ಮಾನವ ಕುಲವೊಂದೇ ಎಂಬ ಅಭಿಪ್ರಾಯ ಎಲ್ಲ ಸಂತರ ಧ್ಯೇಯವಾಗಿತ್ತು. ಅವಿಸ್ಮರಣೀಯರಾದ ವೇಮನ ಯೋಗಿಯಂಥವರ ತತ್ವಾದರ್ಶಗಳನ್ನು ನಾವು ನೀವು, ಹಾಗೂ ಮುಂದಿನ ಯುವ ಜನಾಂಗ ಅನುಸರಿಸಿದಾಗ ಮಾತ್ರ ಇಂತಹ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಬಾಗಲಕೋಟೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಮಾತನಾಡಿ, ಭಾರತ ದೇಶದಲ್ಲಿ ಪ್ರಸಿದ್ದಿ ಪಡೆದ ತ್ರಿಪದಿ ಕವಿಗಳ ಸಾಲಿನಲ್ಲಿ ವೇಮನರು ಅಗ್ರ ಗಣ್ಯರು. ಆಂಧ್ರಪ್ರದೇಶದಲ್ಲಿ ವೇಮನರು, ಕರ್ನಾಟಕದ ಸರ್ವಜ್ಞ, ತಮಿಳುನಾಡಿನ ತಿರುವಳ್ಳುವರ್ ತಮ್ಮ ತ್ರಿಪದಿ ಮೂಲಕ ಜನಜಾಗೃತಿಗೊಳಿಸಿದರು ಎಂದು ತಿಳಿಸಿದರು.

ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ ಕಕರಡ್ಡಿ, ನಿವೃತ್ತ ತಾಲೂಕಾಧಿಕಾರಿ ಆರ್.ಎಲ್.ಕಟಗೇರಿ ಮಾತನಾಡಿದರು. ಅಪರ ಜಿಲ್ಲಾಽಕಾರಿ ಮಹಾದೇವ ಮುರಗಿ, ಎಂ.ಆರ್.ಪಾಟೀಲ, ಡಾ.ಆರ್.ಟಿ.ಪಾಟೀಲ, ಡಾ.ಸಿ.ಆರ್.ಸೋರಗಾಂವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net