ಭೂಮಿಯ ಹಕ್ಕಿಗಾಗಿ ಮೊಂಬತ್ತಿ ಮೆರವಣಿಗೆ

12SIRSI5
Published on

ವಿಜಯವಾಣಿ ಸುದ್ದಿಜಾಲ ಶಿರಸಿ: ನಗರದ ಹೊರವಲಯದ ನಾರಾಯಣಗುರು ನಗರದ ಸಾರ್ವಜನಿಕರು ತಮ್ಮ ಭೂಮಿ ಹಕ್ಕಿನ ಹೋರಾಟದ ಅಂಗವಾಗಿ ಬುಧವಾರ ಸಂಜೆ ಮೊಂಬತ್ತಿ ಮೆರವಣಿಗೆ ನಡೆಸಿದರು.

ನಾರಾಯಣಗುರು ನಗರದಲ್ಲಿ 497 ಮನೆಗಳಿದ್ದು, 5 ದಶಕದ ಹಿಂದೆಯೇ ಇಲ್ಲಿ ಜನ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಬಳಿಕ ಇಲ್ಲಿನ ನಿವೇಶನಗಳನ್ನು ಕಂದಾಯ ಇಲಾಖೆಯ ಮೂಲಕ ಹಂಚಿಕೆ ಮಾಡಿ ಹಕ್ಕು ಪತ್ರಗಳನ್ನು ಸಹ ನೀಡಲಾಗಿದೆ.

ಆದರೆ, 2018ರಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಸಭೆ ಕರೆದು ನಾರಾಯಣಗುರು ನಗರದ ಸರ್ವೆ ನಂಬರ್ 53ರ ನಿವೇಶನಗಳು ಡಿಫಾರೆಸ್ಟ್ ಆಗಿಲ್ಲ ಎಂದು ನಿರ್ಧರಿಸಲಾಯಿತು. ಬಳಿಕ ಶಿರಸಿ ತಹಸೀಲ್ದಾರರು ನಾರಾಯಣಗುರು ನಗರದ ನಿವೇಶನಗಳ ಮಾರಾಟ ಖರೀದಿ, ಬ್ಯಾಂಕ್ ಅಡಮಾನ ಸಾಲ ಇತ್ಯಾದಿ ಎಲ್ಲ ಹಕ್ಕುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದರು. ಏಕಾಏಕಿ ಹೊರಡಿಸಲಾದ ಆದೇಶದಿಂದ ತಮ್ಮ ಭೂಮಿ ಹಕ್ಕಿನಿಂದ ವಂಚಿತರಾದ ಇಲ್ಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಹಸೀಲ್ದಾರರ ಈ ಅವೈಜ್ಞಾನಿಕ ಆದೇಶವನ್ನು ರದ್ದುಪಡಿಸುವಂತೆ ಕೋರಿ ಹಲವಾರು ಬಾರಿ ಹೋರಾಟ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ, ಜನಪ್ರತಿನಿಧಿಗಳು ಅಧಿಕಾರಿಗಳು ನಮ್ಮ ಅಳಲನ್ನು ಗಮನಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಫೆ. 18ರಂದು ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಮುಖರು ತಿಳಿಸಿದರು.

ಮೆರವಣಿಗೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ ಬಂಕಾಪುರ, ನಾರಾಯಣ ಶೆಟ್ಟಿ, ಸದಾನಂದ ಗೌಡರ್, ಸುನಂದಾ ಶೆಟ್ಟಿ, ಶಾಂತಲಾ ಶೆಟ್ಟಿ, ಜೀವನ ಪೈ, ಶರೀಫಾ ಮಂಗಳೂರು ಇತರರು ಇದ್ದರು.

ಪ್ರತಿಭಟನೆಯ ಪೂರ್ವಭಾವಿ ಯಾಗಿ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊಂಬತ್ತಿ ಮೆರವಣಿಗೆ ನಡೆಸಲಾಗಿದೆ. | ಗೌರೀಶ ನಾಯ್ಕ ನಾರಾಯಣಗುರುನಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net