

ಬೇಲೂರು: ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಅಧಿಕಾರಿಗಳು ಈ ಯೋಜನೆಯಲ್ಲಿ ರೈತರನ್ನು ನಂಬಿಸಿ ವಂಚಿಸಿದ್ದಾರೆ. ಜಮೀನು ಕಳೆದುಕೊಂಡ ನಮಗೆ ಸೂಕ್ತ ಪರಿಹಾರ ನೀಡಿ ಕಾಮಗಾರಿ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗಂಗೂರು ರೈತ ಸಿದ್ದೇಶ್ ಎಚ್ಚರಿಸಿದರು.
2017-18ರಲ್ಲಿ ಎತ್ತಿನಹೊಳೆ ಯೋಜನೆ ಸಕಲೇಶಪುರ-ಆಲೂರು, ಬೇಲೂರು ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಗಂಗೂರು ಗ್ರಾಮದ ಮೂಲಕ ಹಾದು ಹೋಗಿದೆ. ತಾಲೂಕಿನ ಐದಳ್ಳ ಕಾವಲಿಗೆ ಸಂಬಂಧಿಸಿದ ಗಂಗೂರು, ಸಾಣೇನಹಳ್ಳಿ, ಮಲಯಪ್ಪನ ಕೊಪ್ಪಲು, ಚಟ್ನಹಳ್ಳಿ ಗ್ರಾಮದ 125 ಎಕರೆ ಜಮೀನು ಈ ಕಾಮಗಾರಿಗೆ ಒಳಪಡುತ್ತದೆ. ಆದರೆ ಕಾಮಗಾರಿಗೂ ಮುನ್ನ ಎತ್ತಿನಹೊಳೆ ಯೋಜನಾಧಿಕಾರಿ ಮತ್ತು ಗುತ್ತಿಗೆದಾರರು ಭೂಮಿ ಕಳೆದುಕೊಂಡ ರೈತರಿಂದ ಭೂ ದಾಖಲೆ ಪಡೆದು ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಶೇ.80ರಷ್ಟು ಕಾಲುವೆ ಕಾಮಗಾರಿ ನಡೆಸಿದ್ದರೂ ಇಲ್ಲಿಯವರೆಗೂ ನಮಗೆ ಪರಿಹಾರ ನೀಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಬಗ್ಗೆ 5 ವರ್ಷಗಳಿಂದ ಒತ್ತಾಯ ಮಾಡಿದರೂ ಎತ್ತಿನಹೊಳೆ ಯೋಜನಾಧಿಕಾರಿ ಮತ್ತು ಗುತ್ತಿಗೆದಾರರು ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ಈಗ ನೋಡಿದರೆ ಜಮೀನು ಅರಣ್ಯ ಇಲಾಖೆಗೆ ಸೇರುತ್ತದೆ. ಯಾವುದೇ ದಾಖಲೆಗಳು ಸ್ಪಷ್ಪವಾಗಿಲ್ಲ ಎಂದು ಇಲ್ಲದ ಸಬೂಬು ಹೇಳುತ್ತಾರೆ. ಈ ಜಮೀನುಗಳಲ್ಲಿ 40 ವರ್ಷದ ತೆಂಗಿನ ಮರಗಳಿವೆ. ಜತೆಗೆ, ದಾಖಲೆ ಪತ್ರಗಳಿದ್ದರೂ ಅರಣ್ಯ ಇಲಾಖೆ ಈ ಭೂಮಿ ನಮಗೆ ಸೇರಿದೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲದೆ, ಎತ್ತಿನಹೊಳೆ ಯೋಜನೆಯ ಕಾಮಗಾರಿ ಮುಂದಿನ 100 ದಿನಗಳಲ್ಲಿ ಮುಕ್ತಾಯವಾಗಬೇಕೆಂದು ಸಚಿವರು ಆದೇಶಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬೇಗ ಕಾಮಗಾರಿ ಮುಗಿಸಲು ಮುಂದಾಗಿದ್ದಾರೆ. ಆದರೆ ನಮಗೆ ಸೂಕ್ತ ಪರಿಹಾರ ನೀಡದೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಮೂರು ದಿನಗಳಿಂದ ಎತ್ತಿನಹೊಳೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟಿಸುತ್ತಿದ್ದೇವೆ. ಆದರೂ ಜಿಲ್ಲಾಧಿಕಾರಿ, ತಹಸೀಲ್ದಾರ್, ಎತ್ತಿನಹೊಳೆ ಯೋಜನಾಧಿಕಾರಿ ಮತ್ತು ಗುತ್ತಿಗೆದಾರರು ಬಂದಿಲ್ಲ. ನಮಗೆ ಈ ಭೂಮಿ ಬಿಟ್ಟರೆ ವ್ಯವಸಾಯಕ್ಕೆ ಭೂಮಿ ಇಲ್ಲದೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎತ್ತಿನಹೊಳೆ ಯೋಜನಾಧಿಕಾರಿ ಶೀಘ್ರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನಮಗೆ ಪರಿಹಾರ ನೀಡುವ ತನಕ ಪ್ರತಿಭಟನಾ ಧರಣಿ ಕೈಬಿಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಗಂಗೂರು ಗ್ರಾಮದ ರೈತರಾದ ಜಿ.ಎಸ್.ರಮೇಶ್, ದರ್ಶನ್, ಆನಂದಗೌಡ ಇದ್ದರು.