ಭೀತಿ ಹುಟ್ಟಿಸಿದ ಒಂಟಿ ಹುಲಿ ಸಂಚಾರ

Oplus_0
Oplus_0
Published on

ಯಳಂದೂರು: ತಾಲೂಕಿನ ಗೌಡಹಳ್ಳಿ-ಮಲಾರಪಾಳ್ಯ ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಒಂಟಿ ಹುಲಿ ಓಡಾಡುತ್ತಿದ್ದು, ರೈತರು ಸೇರಿದಂತೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಗೌಡಹಳ್ಳಿ-ಮಲಾರಪಾಳ್ಯ ಅವಳಿ ಗ್ರಾಮಗಳು ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ಯಳಂದೂರು ವಲಯಕ್ಕೆ ಸೇರಿದ ಕಾಡಂಚಿನ ಗ್ರಾಮಗಳಾಗಿವೆ. ಇಲ್ಲಿ ಅರಣ್ಯಕ್ಕೆ ಹೊಂದಿಕೊಂಡಂತೆಯೇ ನೂರಾರು ಎಕರೆ ಕೃಷಿಭೂಮಿ ಇದೆ. ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಈ ಭಾಗದಲ್ಲಿ ರೈತರ ಸಂಚಾರ ಅಧಿಕವಾಗಿದೆ. ಅರಣ್ಯದಿಂದ ಕೃಷಿಭೂಮಿಯತ್ತ ಆನೆಗಳು ಬಾರದಂತೆ ಕಂದಕ ನಿರ್ಮಾಣ ಮಾಡಿರುವುದರಿಂದ ಆನೆಗಳ ಹಾವಳಿ ಇಲ್ಲವಾಗಿದೆ. ಆದರೆ ಕಾಡೆಮ್ಮೆಗಳು, ಹಂದಿ, ಜಿಂಕೆಗಳು ಕೃಷಿಭೂಮಿಯತ್ತ ಬರುವುದು ಸಹಜವಾದರೂ ರೈತರು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಈ ಭಾಗದ ಆಮೆಕೆರೆ ಬೀಟ್ ವ್ಯಾಪ್ತಿಯ ಜಮೀನುಗಳ ಸುತ್ತಮುತ್ತ ಹುಲಿ ಕಾಣಿಸಿಕೊಂಡಿರುವುದು ರೈತರು ಹಾಗೂ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಕರು ತಿಂದು ಹೋಯಿತೆ ಹುಲಿ?: ಮಲಾರಪಾಳ್ಯ ಗ್ರಾಮದ ಮಡಿವಾಳ ಬೀದಿಯ ಮಹದೇವಶೆಟ್ಟಿ ಎಂಬ ರೈತರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಸುಮಾರು ಒಂದು ವರ್ಷದ ಕರುವೊಂದನ್ನು ಹೊತ್ತೊಯ್ದು ಅಲ್ಲಿಂದ ಸುಮಾರು ನೂರು ಮೀಟರ್ ದೂರದಲ್ಲಿ ಕರುವನ್ನು ಸಂಪೂರ್ಣ ಭಕ್ಷಿಸಿ ತಲೆ ಹಾಗೂ ಕಾಲುಗಳನ್ನು ಮಾತ್ರ ಬಿಟ್ಟು ಹೋಗಿತ್ತು.

ಈ ವಿಷಯ ಕಾಳ್ಗಿಚ್ಚಿನಂತೆ ಹಬ್ಬಿ ಆತಂಕ ಹುಟ್ಟಿಸಿತ್ತು. ಕರು ತಿಂದದ್ದು ಹುಲಿಯೋ, ಚಿರತೆಯೋ ಎಂಬ ಚರ್ಚೆ ನಡೆಯುತ್ತಿರುವಾಗಲೇ ಮಲಾರಪಾಳ್ಯ ಸಮೀಪದ ಶಿವನ ದೇವಸ್ಥಾನದ ಸಮೀಪ ಹುಲಿ ಓಡಾಡಿದ್ದು ಅದರ ವಿಡಿಯೋ ಮೊಬೈಲ್‌ಗಳಲ್ಲಿ ಸೆರೆಯಾಗಿದ್ದು ವೈರಲ್ ಸಹ ಆಯಿತು.

ನಂತರ ಮಲಾರಪಾಳ್ಯದ ಮಹದೇವಶೆಟ್ಟಿ ಅವರ ಕರು ತಿಂದಿರುವುದು ಈ ಹುಲಿಯೇ ಎಂಬ ಮಾತುಗಳು ಚರ್ಚೆಯಾಗುತ್ತಿವೆ. ಇದರ ನಡುವೆಯೇ ಶನಿವಾರ ಬೆಳಗ್ಗೆ ಮಲಾರಪಾಳ್ಯದಿಂದ ಒಂದು ಕಿ.ಮೀ. ದೂರದಲ್ಲಿರುವ ರಸ್ತೆಯಂಚಿನಲ್ಲಿ ಉಳುಮೆ ಮಾಡಿರುವ ಚಿಕ್ಕಣ್ಣ, ನೀಲಯ್ಯ ಎಂಬುವರ ಜಮೀನಿನಲ್ಲಿ ಹುಲಿಯ ಹೆಜ್ಜೆ ಗುರುತು ಕಂಡುಬಂದಿದೆ. ಅಲ್ಲದೆ ಜಮೀನಿಗೆ ಹೊರಟಿದ್ದ ರೈತರಿಬ್ಬರು ಬೆಳ್ಳಂಬೆಳಗ್ಗೆ ಆನೆ ಕಂದಕ ದಾಟಿ ಮದ್ದೂರು ಗುಡ್ಡ ಹತ್ತಿ ಹುಲಿ ಹೋಗುತ್ತಿರುವುದನ್ನು ಗಮನಿಸಿದ್ದು, ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಸೆರೆಗೆ ಪ್ರಯತ್ನ ನಡೆಸದ ಅರಣ್ಯ ಇಲಾಖೆ: ಗ್ರಾಮದೊಳಕ್ಕೇ ಹುಲಿ ನುಗ್ಗಿ ಕರುವೊಂದನ್ನು ಹೊತ್ತೊಯ್ದು ತಿಂದಿದೆ. ಈ ವಿಷಯ ಅರಣ್ಯ ಇಲಾಖೆಗೆ ಗೊತ್ತಾಗಿದೆ. ನಂತರ ಒಂದೆರಡು ದಿನಗಳ ಕಾಲ ಜೀಪಿನಲ್ಲಿ ಬಂದು ಬೀಟ್ ಹಾಕಿ ಹೋಗಿರುವುದು ಹೊರತುಪಡಿಸಿದರೆ ಸೆರೆಗೆ ಮುಂದಾಗಿಲ್ಲ. ಕರು ತಿಂದಿರುವುದು ಹುಲಿಯೋ, ಚಿರತೆಯೋ ಎಂಬುದು ಸ್ಪಷ್ಟವಾಗಿಲ್ಲ. ಒಮ್ಮೆ ರುಚಿ ಕಂಡ ಮೇಲೆ ಈಗಾಗಲೇ ಕರು ತಿಂದಿರುವ ಸುತ್ತಮುತ್ತ ಯಾವ ಕ್ಷಣದಲ್ಲಾದರೂ ಬೇಟೆಗಾರ ಪ್ರಾಣಿ ಮತ್ತೆ ಬರುವ ಸಾಧ್ಯತೆ ಇರುತ್ತದೆ. ಈ ವಿಚಾರ ಗೊತ್ತಿದ್ದರೂ ಅರಣ್ಯ ಇಲಾಖೆಯವರು ಬೋನು ಇಟ್ಟು ಭಕ್ಷಕ ಪ್ರಾಣಿಯನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ.

ಕಾಡುಪ್ರಾಣಿಗಳು ಸತ್ತು ಹೋದರೆ ಸಂಬಂಧಿಸಿದ ರೈತರು, ಸ್ಥಳೀಯರ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿ ತೊಂದರೆ ಕೊಡುವ ಅರಣ್ಯ ಇಲಾಖೆ, ಹುಲಿ ಪತ್ತೆಯಾಗಿದೆ, ಈಗಾಗಲೇ ಕರು ತಿಂದಿದೆ ಎಂದು ಸ್ಥಳೀಯವಾಗಿ ಚರ್ಚೆಯಾಗುತ್ತಿದ್ದರೂ, ಮೊಬೈಲ್‌ಗಳಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್ ಆಗುತ್ತಿದ್ದರೂ ಇದುವರೆಗೂ ಹುಲಿ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿಲ್ಲದಿರುವುದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಲು ಕಾರಣವಾಗಿದೆ.

ಮಲಾರಪಾಳ್ಯದಿಂದ ಸುಮಾರು ನಾಲ್ಕು ಕಿ.ಮೀ. ದೂರದವರೆಗೆ ಆಮೆಕೆರೆ ರಸ್ತೆಯಲ್ಲಿ ನಿತ್ಯವೂ ಎಂಟರಿಂದ ಹತ್ತು ಜನರು ವಾಕಿಂಗ್ ಮಾಡುತ್ತೇವೆ. ಬೆಳಗ್ಗೆಯಿಂದ ಸಂಜೆವರೆಗೆ ಈ ರಸ್ತೆಯಲ್ಲಿ ನೂರಾರು ರೈತರು ಓಡಾಡುತ್ತಾರೆ. ಸ್ಥಳೀಯ ರೈತರು ಹುಲಿ ಓಡಾಟವನ್ನು ಗಮನಿಸಿದ್ದಾರೆ. ಹೆಜ್ಜೆ ಗುರುತು ಹುಲಿಯದ್ದೋ, ಚಿರತೆಯದ್ದೋ ಸ್ಪಷ್ಟತೆಯಿಲ್ಲ. ಅರಣ್ಯ ಇಲಾಖೆಯವರು ಹುಲಿ ಅಥವಾ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ಶೀಘ್ರವೇ ಪ್ರಾರಂಭಿಸುವುದು ಉತ್ತಮ. ಗೌಡಹಳ್ಳಿ ಮಹೇಶ್, ವಕೀಲ ಬಿಆರ್‌ಟಿ ಅರಣ್ಯ ಪ್ರದೇಶದ ಗೌಡಹಳ್ಳಿ-ಮಲಾರಪಾಲ್ಯದ ಕಾಡಂಚಿನ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಆರ್‌ಎಫ್‌ಒಗೆ ಸೂಚಿಸಿ ಆ ಪ್ರದೇಶ ವ್ಯಾಪ್ತಿಯಲ್ಲಿ ಗಸ್ತು ಜತೆ ಬೋನು ಅಳವಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಶ್ರೀಪತಿ, ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net