ಭಾಷೆ ಪ್ರೌಢಿಮೆಗೆ ಕಥೆ, ಕಾದಂಬರಿಗಳನ್ನು ಓದಿ

5KMD-1
Published on

ಕೆ.ಎಂ.ದೊಡ್ಡಿ: ಪಠ್ಯದ ಜತೆಗೆ ಕಥೆ, ಕಾದಂಬರಿಗಳನ್ನು ಓದುವ ಮೂಲಕ ಭಾಷೆ ಪ್ರೌಢಿಮೆ ಬೆಳೆಸಿಕೊಳ್ಳಿ ಎಂದು ಭಾರತೀ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮೀಪದ ಮೆಣಸಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.ರಾಮಕೃಷ್ಣೇಗೌಡ ಅವರ ಪುತ್ರ ರಾಮಣ್ಣ ಸ್ಮರಣಾರ್ಥ ಆಯೋಜಿಸಿದ್ದ ‘ನನ್ನ ಪ್ರೀತಿಯ ಪುಸ್ತಕ’ ಕುರಿತ ಭಾಷಣ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ತರಗತಿಯ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಅದನ್ನು ಹೊರತುಪಡಿಸಿ ಕಥೆ, ಕಾದಂಬರಿ, ದಿನ ಪ್ರತಿಕೆಗಳನ್ನು ಓದಿದರೆ ಜ್ಞಾನ ಹೆಚ್ಚುತ್ತದೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಎಂದರು.

ಕಲಿಯುವ ಹಂತದಲ್ಲೆ ತಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು, ಆ ನಿಟ್ಟಿನ ಚಿಂತನೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು, ಆಗ ನಿಮ್ಮ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳುತ್ತದೆಂದು ತಿಳಿಸಿದರು.

ಭಾರತೀ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಎಂ.ಮಾಯಪ್ಪ ಮಾತನಾಡಿ, ಮಕ್ಕಳು ಚಿಕ್ಕಂದಿನಲ್ಲಿಯೇ ಕಲಿಕೆಗೆ ಪೂರಕವಾಗಿರುವ ಪುಸ್ತಕ, ಪತ್ರಿಕೆಗಳನ್ನು ಓದುವ ಮೂಲಕ ಜ್ಞಾಪಕಶಕ್ತಿಯನ್ನು ವೃದ್ಧಿಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ತಮಗೆ ನೀಡಲಾಗಿದ್ದ ಪುಸ್ತಕಕ್ಕೆ ಸಂಬಂಧಿಸಿದಂತೆ ಭಾಷಣ ಮಾಡಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಕಲಾವಿದ ಕೀಲಾರ ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ಮಹದೇವು, ಎಸ್‌ಡಿಎಂಸಿ ಅಧ್ಯಕ್ಷ ಸೋಮ, ಸದಸ್ಯರಾದ ದೇವರಾಜು, ರಾಮಲಿಂಗೇಗೌಡ, ವೆಂಕಟೇಶ್, ತನುಶ್ರೀ, ಮಾಧು, ಗ್ರಂಥಪಾಲಕ ಆಲೂರೇಗೌಡ, ಸಿಆರ್‌ಸಿ ಬೋರಯ್ಯ, ಮುಖ್ಯ ಶಿಕ್ಷಕಿ ಮಮತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net