ಭಾವನೆಗಳ ಕಲಾತ್ಮಕ ಅಭಿವ್ಯಕ್ತಿ ಕಾವ್ಯ

31 gkp 03
Published on

ಗೋಣಿಕೊಪ್ಪ: ಕನ್ನಡ ಸಾಹಿತ್ಯ ಪರಂಪರೆ ಆರಂಭವಾಗಿದ್ದು ಮಹಾಕಾವ್ಯದ ಮೂಲಕ, ಪ್ರಪಂಚದ ಬೇರೆ, ಬೇರೆ ಸಾಹಿತ್ಯವನ್ನು ಅವಲೋಕಿಸಿದಾಗ ಕಾವ್ಯ ಪರಂಪರೆಯ ಮೂಲಕ ಸಾಹಿತ್ಯ ಪರಂಪರೆ ಪ್ರಾರಂಭವಾಗಿರುವುದು ಅತಿ ವಿರಳ. ಆದರೆ, ಕನ್ನಡ ಸಾಹಿತ್ಯದ ಪರಂಪರೆ 2500 ವರ್ಷದ ಭವ್ಯ ಇತಿಹಾಸ ಹೊಂದಿದೆ ಎಂದು ಮಂಡ್ಯ ಜಿಲ್ಲೆಯ ಸಾಹಿತಿ ಟಿ.ಸತೀಶ್ ಜವರೇಗೌಡ ಬಣ್ಣಿಸಿದರು.


ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದೊಂದಿಗೆ ಪಟ್ಟಣದ ಕಾವೇರಿ ಕಾಲೇಜು ಸಭಾಂಗಣದಲ್ಲಿ ಕವಿ, ಪತ್ರಕರ್ತ ಕೆ.ಬಿ.ಜಗದೀಶ್ ಜೋಡು ಬೀಟಿ ರಚಿಸಿದ 2ನೇ ಕೃತಿ ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.


ಕನ್ನಡದ ಕಾವ್ಯ ಪರಂಪರೆ ಎಂದಿಗೂ ಬತ್ತುವುದಿಲ್ಲ. ಚೈತನ್ಯಶೀಲತೆ ಕಳೆದುಕೊಳ್ಳುವುದಿಲ್ಲ. ಕನ್ನಡ ಕಾವ್ಯ ಪರಂಪರೆಯ ಮಹಾಸಾಗರಕ್ಕೆ ಕೆ.ಬಿ. ಜಗದೀಶ್ ಕವನ ಸಂಕಲನ ಸಣ್ಣ ತೊರೆಯಾಗಿ ಸಾಗರವನ್ನು ಸೇರಿಕೊಂಡಿದೆ. ಕಾವ್ಯ ಎನ್ನುವುದು ಭಾವನೆಗಳ ಕಲಾತ್ಮಕ ಅಭಿವ್ಯಕ್ತಿ. ನಾಟಕ, ಕಾದಂಬರಿ ಹಾಗೂ ಕಥೆಯ ಪ್ರಕಾರಕ್ಕಿಂತಲೂ ಅತ್ಯಂತ ಜನಪ್ರಿಯವಾಗಿರುವುದು ಕಾವ್ಯ ಪ್ರಕಾರ ಎಂದು ವಿಶ್ಲೇಷಿಸಿದರು.


ಬಹುತೇಕ ಕವಿಗಳು ಸಾಹಿತ್ಯ ಲೋಕವನ್ನು ಪ್ರವೇಶ ಮಾಡುವುದು ಕಾವ್ಯದ ಹೆಬ್ಬಾಗಿಲಿನ ಮೂಲಕ ಎನ್ನುವುದು ಗಮನಾರ್ಹ. ಕನ್ನಡ ಕಾವ್ಯ ಪರಂಪರೆಯನ್ನು ಗಮನಿಸಿದಾಗ ಕವಿತೆ ಎನ್ನುವುದು ಕವಿಯ ಲೋಕಾನುಭವಗಳನ್ನು ತೆರೆದಿಡುವ ಮಾಧ್ಯಮವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಕವಿತೆಗಳ ಮೂಲಕ ನಮ್ಮ ಮನಸ್ಸಿನ ಭಾವನೆಗಳನ್ನು ಅತ್ಯಂತ ಸಮರ್ಥವಾಗಿ, ಕಲಾತ್ಮಕವಾಗಿ ಹಾಗೂ ಅರ್ಥವಾಗುವ ರೀತಿಯಲ್ಲಿ ದಾಟಿಸುವ ಅವಕಾಶ ಹೆಚ್ಚಿದೆ ಎಂದರು.


ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿದರು.


ಸಾಹಿತಿ ಸೋಮೆಯಂಡ ಕೌಸಲ್ಯ ಸತೀಶ್ ಪುಸ್ತಕದ ಕುರಿತು ಮಾತನಾಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್ ಗುಹ್ಯ, ಕಾವೇರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಲೇಖಕ ಜಗದೀಶ್ ಜೋಡುಬೀಟಿ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net