

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ 13 ದಿನಗಳ ನಂತರ ಭಾರಿ ವಾಹನಗಳ ಓಡಾಟ ಬುಧವಾರದಿಂದ ಆರಂಭವಾಗಲಿದೆ.
ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಅರಬೈಲ್ ಘಟ್ಟ ಪ್ರದೇಶದಲ್ಲಿ ಅಲ್ಲಲ್ಲಿ ಗುಡ್ಡ ಕುಸಿದು, ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಲಾರಿ, ಬಸ್ನಂತಹ ದೊಡ್ಡ ವಾಹನಗಳ ಓಡಾಟದಿಂದ ಹೆದ್ದಾರಿ ಇನ್ನಷ್ಟು ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಹೆದ್ದಾರಿ ಕುಸಿದ ಸ್ಥಳದ ಪಕ್ಕದಲ್ಲೇ ಕೇವಲ ಒಂದು ವಾರದಲ್ಲಿ ಪರ್ಯಾಯ ರಸ್ತೆಯನ್ನು ನಿರ್ವಿುಸಿ, ಸಣ್ಣ ಗಾತ್ರದ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಹೆದ್ದಾರಿ ಕುಸಿದ ಸ್ಥಳದಲ್ಲಿ ತಡೆಗೋಡೆಯನ್ನು ನಿರ್ವಿುಸಲಾಗಿದೆ. ಎರಡು ದಿನಗಳ ಹಿಂದೆ ಹೊಸ ರಸ್ತೆಯಲ್ಲಿ ಲಾರಿಗಳನ್ನು ಪ್ರಾಯೋಗಿಕವಾಗಿ ಚಲಾಯಿಸಿ ಪರೀಕ್ಷಿಸಲಾಗಿದೆ. ಮಂಗಳವಾರವೂ ದೊಡ್ಡ ವಾಹನಗಳ ಓಡಾಟಕ್ಕೆ ಪ್ರಾಯೋಗಿಕ ಅವಕಾಶ ನೀಡಲಾಗಿತ್ತು.
13 ದಿವಸಗಳಿಂದ ಹೋಗಲು ಸಾಧ್ಯವಾಗದೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಬೀಡುಬಿಟ್ಟಿದ್ದ ಲಾರಿಗಳಿಗೆ ಮಂಗಳವಾರ ಬಿಡುಗಡೆಯ ಭಾಗ್ಯ ದೊರಕಿದೆ. ಪಟ್ಟಣದ ವಿವಿಧೆಡೆ, ಹಳಿಯಾಳ ಕ್ರಾಸ್ನಿಂದ ಕಿರವತ್ತಿ, ಹೊಸಳ್ಳಿಯವರೆಗೂ ನಿಂತಿದ್ದ ಲಾರಿಗಳಿಗೆ ಅರಬೈಲ್ ಘಟ್ಟದ ಮೂಲಕ ಹೋಗಲು ಅವಕಾಶ ನೀಡಿದ್ದರಿಂದ ಹೆದ್ದಾರಿಯಲ್ಲಿ ಒಂದೆರಡು ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸರು ಸ್ಥಳದಲ್ಲಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.