ಭಾರಿ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು

24mnd5(A)
Published on

ಮುಂಡಗೋಡ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಚರಂಡಿ ನೀರು ರಸ್ತೆಗೆ ನುಗ್ಗಿ ಅವಾಂತರ ಸೃಷ್ಟಿಸಿದರೆ ಕೆಲವು ಕಡೆಗಳಲ್ಲಿ ಮನೆಗೆ ನುಗ್ಗಿ ಫಜೀತಿ ತಂದೊಡ್ಡಿದೆ.

ಸುಮಾರು ಅರ್ಧ ಗಂಟೆ ಸುರಿದ ಮಳೆಗೆ ಪಟ್ಟಣದ ಹುಬ್ಬಳ್ಳಿ-ಶಿರಸಿ, ಬಂಕಾಪುರ-ಯಲ್ಲಾಪುರ ರಸ್ತೆಗಳಲ್ಲಿ, ಗಾಂಧಿ ನಗರ, ಸುಭಾಸ ನಗರ, ಇಂದಿರಾ ನಗರ, ಮಾರಿಕಾಂಬಾ ನಗರ, ನೆಹರು ನಗರಗಳ ರಸ್ತೆಯ ಪಕ್ಕದ ಚರಂಡಿ ಹೂಳು ತೆಗೆಯದೇ ಇರುವುದರಿಂದ ರಸ್ತೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ನಿಂತಿದ್ದರಿಂದ ರಸ್ತೆ ಸಂಪೂರ್ಣ ಕೆರೆಯಂತಾಗಿತ್ತು.

ಪಟ್ಟಣದ ಮಾರಿಕಾಂಬಾ ನಗರದ ಮರ್ದಾನಸಾಬ್ ಮರಗಡಿ, ಮಕ್ಬುಲಸಾಬ್ ಮಿಠಾಯಿಗಾರ, ಸೋಮಣ್ಣಾ ಬಡಿಗೇರ, ಮಕ್ಬುಲಸಾಬ್ ಚಾವುಸ್ ಎಂಬುವರ ಮನೆಗಳಿಗೆ ಮಳೆ ನೀರು ಹೊಕ್ಕಿದೆ. ನೀರಿನಲ್ಲಿ ತೇಲಿ ಹೋಗುತ್ತಿದ್ದ ಮನೆಯಲ್ಲಿರುವ ದಿನಬಳಕೆ ವಸ್ತುಗಳನ್ನು ಜನರು ಓಡಿ ಹೋಗಿ ತರುವ ದೃಶ್ಯ ಕಂಡು ಬಂತು.

ಹಲವೆಡೆ ಅಬ್ಬರ: ಶುಕ್ರವಾರ ಸಿದ್ದಾಪುರ ಪಟ್ಟಣ ಸೇರಿ ಗ್ರಾಮೀಣ ಭಾಗದ ಕೆಲವೆಡೆ ಮಳೆಯಾಗಿದೆ. ದಾಂಡೇಲಿಯಲ್ಲಿ ಬೆಳಗ್ಗೆ ಚುರುಕಿನ ಬಿಸಿಲು ಇತ್ತು. ಸಂಜೆ ವೇಳೆಗೆ ಸ್ವಲ್ಪ ಹೊತ್ತು ರಭಸದ ಮಳೆಯಾಗಿದೆ. ಶಿರಸಿ ಹಾಗೂ ಸುತ್ತಮುತ್ತ ಸಣ್ಣ ಮಳೆಯಾದ ಬಗ್ಗೆ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net