

ಕಲಬುರಗಿ: ಜಿಲ್ಲೆಯಲ್ಲಿ ಇತ್ತೀಚಿಗೆ ಭಾರಿ ಮಳೆ ಸುರಿದಿದ್ದು, ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ೨೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಮಾಹಿತಿ ಲಭಿಸಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹೇಳಿದ್ದಾರೆ.
ಹೆಸರು- ೯೭೮ ಹೆಕ್ಟೇರ್, ಉದ್ದು ೭೦೯೪, ತೊಗರಿ ೧೦,೫೩೮, ಹತ್ತಿ ೭೬೯, ಸೋಯಾಬೀನ್ ೧೮೬ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಅಫಜಲಪುರ- ೬೮೩ ಹೆಕ್ಟೇರ್, ಆಳಂದ ೩೪೬೮, ಚಿಂಚೋಳಿ ೨೯೪೧, ಚಿತ್ತಾಪುರ ೭೪೨, ಕಲಬುರಗಿ ೧೪೫೦, ಕಮಲಾಪುರ ೨೬೪, ಕಾಳಗಿ ೩೫೫೦, ಜೇವರ್ಗಿ ೧೦೫೬, ಸೇಡಂ ೪೮೧೦, ಶಹಾಬಾದ್ ೧೮೧, ಯಡ್ರಾಮಿ ೪೨೦ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೊಳಗಾಗಿದೆ. ೨-೩ ದಿನಗಳಲ್ಲಿ ನಿಖರ ಹಾನಿಯ ಮೊತ್ತ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಈ ವರ್ಷ ವಾಡಿಕೆ ಮಳೆ ೬೩೯ ಮಿಮೀ ಇದ್ದರೆ, ೭೨೧ ಮಿಮೀ ಮಳೆ ಸುರಿದಿದೆ. ಶೇ.೧೩ ವರ್ಷಧಾರೆ ಹೆಚ್ಚಾಗಿದೆ. ನೀರಾವರಿ, ಮಳೆಯಾಶ್ರಿತ ಸೇರಿ ಈ ಬಾರಿ ೮.೬೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ ೮.೯೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಗುರಿ ಮೀರಿ ಶೇ.೧೦೨.೮೦ ಸಾಧನೆ ಮಾಡಿದೆ ಎಂದು ವಿವರಿಸಿದ್ದಾರೆ.