

ಆಲೂರು: ಸೋಮವಾರ ರಾತ್ರಿ ಭಾರಿ ಗಾಳಿ, ಮಳೆಗೆ ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಹಲವು ಮನೆಗಳ ಛಾವಣೆಗಳು ಹಾರಿಹೋಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಹಳ್ಳಿ ಗ್ರಾಮದ ವೀರಭದ್ರ ಎಂಬುವರ ಮನೆಗೆ ಸಿಡಿಲು ಬಡೆದು ಮನೆಯ ಛಾವಣಿಯ ಹೆಂಚುಗಳು ಒಡೆದು ಹೋಗಿವೆ. ಅಲ್ಲದೆ ಮನೆಯ ಟಿವಿ, ದವಸ ಧಾನ್ಯಗಳನ್ನು ಹಾನಿಯಾಗಿದ್ದು ಸುಮಾರು 1 ಲಕ್ಷ ರೂ.ಗೂ ಅಧಿಕ ಮೊತ್ತದ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪಾಳ್ಯ ಗ್ರಾಮದ ಅಂತರಾಘಟ್ಟಮ್ಮ್ ದೇವೆಸ್ಥಾನದ ಮುಂದಿನ ಅರಳಿಮರ ಭಾರಿ ಗಾಳಿ, ಮಳೆಗೆ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಕೊಂಡು ಕುಡಿಯುವ ನೀರಿಗೂ ತೊಂದರೆಯಾಗಿದೆ.
ಆಲೂರು-ಬಿಕ್ಕೋಡು ವಾಟೆಹೊಳೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಗಾಳಿ, ಮಳೆಗೆ ರಸ್ತೆ ಬದಿಯ ಮರಗಳು ಮತ್ತು ಎಂಟು ವಿದ್ಯುತ್ ಕಂಬಗಳು ಮುರಿದು ಹೋಗಿವೆ, ಬೆಳ್ಳಾವರ, ತಾಳೂರು, ನಿಲುವಾಗಿಲು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಗ್ರಾಮಗಳಿಗೆ ವಿದ್ಯುತ್ ಇಲ್ಲದಂತಾಗಿದೆ.
ಕುಂಬಾರಹಳ್ಳಿ ಗ್ರಾಮಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.