

ಕಲಬುರಗಿ: ದೇಶದ ಜನ ಮಣ್ಣಿನ ಜತೆ ಗಾಢ ಸಂಬಂಧ ಹೊಂದಿದ್ದು, ಅದನ್ನು ಪೂಜಿಸಿ ಗೌರವಿಸುತ್ತಾರೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಎ. ಪಾಟೀಲ್ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರವಾಣಿ ೯೦.೮ ಸಮುದಾಯ ರೇಡಿಯೋ ಸಹಯೋಗದಡಿ ಗುರುವಾರ ಆಯೋಜಿಸಿದ್ದ ಮೇರಿ ಮಾಟಿ ಮೇರಾ ದೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೇ ಮಿಟ್ಟಿ ಕಾ ನಮನ್, ವೀರೋಂಕೋ ವಂದನ್ ಎಂಬ ಟ್ಯಾಗ್ ಲೈನ್‌ನ ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಆಯೋಜಿಸುತ್ತಿರುವುದು ಶ್ಲಾಘನೀಯ. ಈ ದೇಶದ ಮಣ್ಣಿನಲ್ಲಿ ಜೀವಕಳೆ ತುಂಬಿದೆ. ಇಂತಹ ಪ್ರಕೃತಿ ನೀಡಿದ ಕೊಡುಗೆಯನ್ನು ನಾವೆಲ್ಲರೂ ಪೂಜಿಸಿ ಗೌರವಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ್ ಮಾತನಾಡಿ, ಇಂತಹ ಕಾರ್ಯಕ್ರಮ ಕೇಂದ್ರ ಸರ್ಕಾರ ಆಯೋಜಿಸುತ್ತಿರುವುದು ಶ್ಲಾಘನೀಯ. ನಿಷ್ಕಲ್ಮಷವಾದ ಮಣ್ಣು ಕಾಮಧೇನು ಕಲ್ಪವೃಕ್ಷವಾಗಿದೆ. ಮನುಷ್ಯ ಜನ್ಮದಿಂದ ಸಾಯುವವರೆಗೂ ಮಣ್ಣು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಮಹಾವಿದ್ಯಾಲಯ ಪ್ರಾಚಾರ್ಯೆ ಜಾನಕಿ ಹೊಸೂರ ಮಾತನಾಡಿ, ಮಣ್ಣಿನ ಮಹತ್ವ, ಸಂರಕ್ಷಣೆ ಬಗ್ಗೆ ಹೆಚ್ಚು ಅರಿತುಕೊಳ್ಳುವುದು ಅಗತ್ಯ. ಅಮೃತ ಮಹೋತ್ಸವ ಜತೆಗೆ ೭೬ನೇ ಸ್ವಾತಂತ್ರ ದಿನ ನಿಮಿತ್ತ ಕೇಂದ್ರ ಸರ್ಕಾರ ಈ ಅಭಿಯಾನ ಆರಂಭಿಸಿದೆ. ದೇಶ ಅಮೃತ ಕಲಶ ಯಾತ್ರೆಗೆ ಸಾಕ್ಷಿಯಾಗಲಿದೆ. ಇದು ಭಾರತದ ಪ್ರತಿ ಕಾರ್ನರ್‌ನಿಂದ ದೆಹಲಿಗೆ ೭೫೦೦ ಕಲಶಗಳಲ್ಲಿ ಮಣ್ಣು ಸಾಗಿಸುವ ಕಾರ್ಯಕ್ರಮ ಆಗಿದೆ ಎಂದು ಹೇಳಿದರು.
ಅಂತರವಾಣಿ ನಿರ್ದೇಶಕ ಡಾ.ಶಿವರಾಜ ಶಾಸ್ತಿç ಹೆರೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಪುಟ್ಟಮಣಿ ದೇವಿದಾಸ ನಿರೂಪಣೆ ಮಾಡಿದರು. ದಾಕ್ಷಾಯಿಣಿ ಕಾಡಾದಿ ವಂದಿಸಿದರು.