

ಸಂತೋಷ ಕೃ. ದೇಶಪಾಂಡೆ
ಬಾಗಲಕೋಟೆ: ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ಜಾರಿಗೊಂಡಿದ್ದ ಭಾಗ್ಯ ಲಕ್ಷ್ಮೀ ಯೋಜನೆಗೆ ಭರ್ತಿ ೧೮ ಪೂರ್ಣಗೊಂಡಿದೆ. ಯೋಜನೆಯ ಲಾಭ ಪಡೆಯಲು ಕಾದು ಕುಳಿತಿದ್ದ ಫಲಾನುಭವಿಗಳಿಗೆ ಸರ್ಕಾರ ವಿಧಿಸಿರುವ ನಿಯಮ, ಷರತ್ತುಗಳು ಆತಂಕ ಸೃಷ್ಟಿಸಿದೆ...!!
೨೦೦೬ ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಬಿ.ಎಸ್.ಯಡಿಯೂರಪ್ಪ ಬಡತನ ರೇಖೆಗ್ಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯ ಲಕ್ಷ್ಮೀ ಯೋಜನೆ ಜಾರಿಗೊಳಿಸಿದ್ದರು. ೨೦೨೪ ಎಪ್ರಿಲ್, ಮೇ, ಜೂನ್ ತಿಂಗಳಿಗೆ ಬರೋಬ್ಬರಿ ೧೮ ವರ್ಷ ಪೂರ್ಣಗೊಳಿಸಿದ ಹೆಣ್ಣುಮಕ್ಕಳಿಗೆ ಬಾಂಡ್ ಮೊತ್ತ ಪಡೆಯಲು ಅರ್ಹತೆ ಹೊಂದಿದ್ದಾರೆ. ಹೀಗಾಗಿ ಈ ವರ್ಷ ಯೋಜನೆ ಫಲಾನುಭವಿಗಳು ಅಗತ್ಯ ದಾಖಲೆ ಸಲ್ಲಿಕೆ ಮಾಡಿದರೇ ಮಾತ್ರ ಲಾಭ ಪಡೆಯಲು ಸಾಧ್ಯ.
ಹತ್ತಾರು ಷರುತ್ತು
ಫಲಾನುಭವಿ ಬಳಿ ಬಾಂಡ್ ಓರಿಜನಲ್ ಪ್ರತಿ ಲಭ್ಯವಿರಬೇಕು. ದಂಪತಿಗಳಿಗೆ ಮೂರು ಮಕ್ಕಳು ಇದ್ದರೇ ತೊಂದರೆ ಇಲ್ಲ. ನಾಲ್ಕು ಮಕ್ಕಳು ಇದ್ದರೇ ಬರಲ್ಲ. ಹೆಣ್ಣು ಮಗುವಿಗೆ ೧೮ ವರ್ಷದೊಳಗೆ ಮದುವೆ ಆಗಿರಬಾರದು. ಮುಖ್ಯವಾಗಿ ಬಾಲ್ಯವಿವಾಹ ಆಗಿದ್ದರೇ ಬರುವದಿಲ್ಲ. ಜನನ ಪ್ರಮಾಣ ಪತ್ರ, ವ್ಯಾಸಂಗ ಪ್ರಮಾಣ ಸಲ್ಲಿಸಬೇಕು. ಕಡ್ಡಾಯವಾಗಿ ೮ ನೇ ತರಗತಿ ಓದಿರಬೇಕು, ಫಲಾನುಭವಿಯ ತಂದೆ, ತಾಯಿಯ ಆಧಾರ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು, ಫಲಾನುಭವಿಯ ಬ್ಯಾಂಕ್ ಖಾತೆ ಹೊಂದಿರಬೇಕು ಅಂತ ಹತ್ತಾರು ಷರುತ್ತು, ನಿಯಮ ವಿಧಿಸಿದೆ.
ಅನೇಕ ಫಲಾನುಭವಿಗಳಲ್ಲಿ ಮೂಲ ಬಾಂಡ್ ಲಭ್ಯವಿರುವುದಿಲ್ಲ. ಜಿಲ್ಲೆಯಲ್ಲಿ ಸಂಭವಿಸಿದ ಮೂರು ಸಾರಿ ಪ್ರವಾಹ ಸಂದರ್ಭದಲ್ಲಿ ನದಿ ತೀರದ ಗ್ರಾಮಸ್ಥರ ದಾಖಲಾತಿಗಳು ಕೊಚ್ಚಿ ಹೋಗಿದ್ದವು. ಕೋವಿಡ್ ಸಂದರ್ಭದಲ್ಲಿ ತಂದೆ, ತಾಯಿ ಕಳೆದುಕೊಂಡ ಮಕ್ಕಳು ಇದ್ದಾರೆ. ಸರ್ಕಾರದ ಬಾಲಕಿಯರ ಬಾಲ ಮಂದಿರ, ಸಂಬಂಧಿಕರ ಮನೆ, ಕುಟುಂಬದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನು ಬಾಲ್ಯ ವಿವಾಹ ಆಗಿರುವ ಉದಾರಣೆ ಜಿಲ್ಲೆಯಲ್ಲಿ ಸಾಕಷ್ಟು ಇವೆ. ಹೀಗೆ ನಾನು ಸಮಸ್ಯೆ, ಸವಾಲುಗಳು ವಾಸ್ಥವದಲ್ಲಿ ಕಾಡತೊಡಗಿವೆ. ಯೋಜನೆ ಲಾಭ ತಟ್ಟುವದಿಲ್ಲವೇ ಎನ್ನುವ ಆತಂಕ ಮನೆ ಮಾಡಿದೆ.
ಅಂಗನವಾಡಿ ಕಾರ್ಯಕರ್ತರಿಗೆ ಜವಾಬ್ದಾರಿ...
ಜಿಲ್ಲೆಯಲ್ಲಿ ಫಲಾನುಭವಿಗಳು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಕಾರ್ಯಕರ್ತರ ಮೂಲಕ ಫಲಾನುಭವಿಗಳ ಗುರುತಿಸುವ ಜವಾಬ್ದಾರಿ ವಹಿಸಲಾಗಿದೆ. ತಾಲೂಕಾ ಕಚೇರಿ ಮೂಲಕ ಸರ್ಕಾರ ಸುತ್ತೋಲೆಗಳು ರವಾನಿಸಲಾಗಿದೆ. ಫಲಾನುಭವಿ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ವಾಸ್ಥವ ಪರಿಶೀಲನೆ ಮಾಡಬೇಕು. ದಾಖಲಾತಿ ಪರಿಶೀಲಿಸಿ ಪಟ್ಟಿ ಸಮೇತ ಇಲಾಖೆಗೆ ಸಲ್ಲಿಸಬೇಕು. ಸದ್ಯಕ್ಕೆ ಇರುವ ಜವಾಬ್ದಾರಿ ನಡುವೇ ಭಾಗ್ಯ ಲಕ್ಷ್ಮೀ ನಿರ್ವಹಣೆ ಹೈರಾಣ ಆಗಿಸಲಿದೇ, ನಿಯಮ ಅನುಸಾರ ಯೋಜನೆಯ ಲಾಭ ತಟ್ಟದಿದ್ದರೇ ಪಾಲಕರು, ಪೋಷಕರು ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ನಮಗೆ ಇದು ಚಿಂತೆಗೆ ಕಾರಣವಾಗಿದೆ ಅಂತ ಹೆಸರು ಹೇಳು ಇಚ್ಛಿಸದ ಅಂಗನವಾಡಿ ಕಾರ್ಯಕರ್ತೆ `ವಿಜಯವಾಣಿ' ಎದುರು ಅಳಲು ತೋಡಿಕೊಂಡರು.
=========
೨೦೦೬ ರಲ್ಲಿ ಜಾರಿಗೊಂಡಿದ್ದ ಭಾಗ್ಯ ಲಕ್ಷ್ಮೀ ಬಾಂಡ್ ಯೋಜನೆ ೨೦೨೪ ಕ್ಕೆ ೧೮ ವರ್ಷ ಪೂರ್ಣಗೊಳ್ಳಲಿದೆ. ಅಂದು ತಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಬಾಂಡ್ ಮಾಡಿಸಿದ ಪಾಲಕರು, ಪೋಷಕರು ಇದಕ್ಕೆ ಅರ್ಹರಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆರು ತಮ್ಮ ವ್ಯಾಪ್ತಿ ಪ್ರದೇಶದ ಫಲಾನುಭವಿ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ. ಸಾಧ್ಯವಾದಷ್ಟು ಫಲಾನುಭವಿಗಳಿಗೆ ಇದರ ಲಾಭ ತಟ್ಟಲು ನಮ್ಮ ಪ್ರಯತ್ನ ಇರಲಿದೆ. ಪ್ರವಾಹ, ಕೋವಿಡ್ ದಿಂದ ಸಮಸ್ಯೆ ಉಂಟಾಗಿದ್ದರೇ ಸರ್ಕಾರದ ಗಮನ ತರಲಾಗುವುದು. ಫಲಾನುಭವಿಗಳು ದಾಖಲಾತಿ ಸರಿಯಾಗಿ ಇಟ್ಟುಕೊಳ್ಳಬೇಕು. ಆತಂಕ ಪಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಕವಿತಾಳ ತಿಳಿಸಿದ್ದಾರೆ.