ಭಾಗ್ಯ ಜ್ಯೋತಿಗೆ ಮೀಟರ್ ಅಳವಡಿಸಬೇಡಿ

10 rtl 01
Published on

ರಟ್ಟಿಹಳ್ಳಿ: ಹುಲ್ಲತ್ತಿ ಗ್ರಾಮದಲ್ಲಿ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದ ಬಡ ಫಲಾನುಭವಿಗಳ ಮನೆಗಳಿಗೆ ಮೀಟರ್ ಅಳವಡಿಸಬಾರದು ಹಾಗೂ ಯಥಾಸ್ಥಿತಿ ಮುಂದುವರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಮೀಟರ್ ಅಳವಡಿಕೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಸಭೆ ಜರುಗಿತು. ರೈತ ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಗಿಹಳ್ಳಿ ಮಾತನಾಡಿ, ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳಿಗೆ ಹೆಸ್ಕಾಂ ಇಲಾಖೆಯು ಮೀಟರ್ ಅಳವಡಿಸುವ ಕ್ರಮಕ್ಕೆ ಮುಂದಾಗಿದೆ. ಕರೊನಾ, ಬರಗಾಲ ಹಾಗೂ ಅತಿವೃಷ್ಟಿಯಿಂದಾಗಿ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಬಡವರಿಗೆ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದ್ದು, ಅದನ್ನೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಮೀಟರ್​ಗಳನ್ನು ಅಳವಡಿಸಬಾರದು ಎಂಬ ತೀರ್ಮಾನ ತೆಗೆದುಕೊಂಡು ಹೆಸ್ಕಾಂ ಇಲಾಖೆಯ ಸ್ಥಳೀಯ ಅಧಿಕಾರಿ ಗಳಿಗೆ ಮನವಿ ಮಾಡಲಾಗಿದೆ ಎಂದರು.

ಗ್ರಾಮಸ್ಥರಾದ ಪರಶುರಾಮ ಮಟ್ಟಿಮನಿ, ನಾಗಪ್ಪ ದೀವಗಿಹಳ್ಳಿ, ರಾಮಚಂದ್ರಪ್ಪ ದೀವಗಿಹಳ್ಳಿ, ಪರಮೇಶಪ್ಪ ಕಿಟ್ಟದ, ಹನುಮಂತಪ್ಪ ಕರಿಯಣ್ಣನವರ, ಸೋಮಪ್ಪ ಉಪ್ಪಾರ, ಮಹಾಂತೇಶ ಕಮ್ಮಾರ, ಕೋಟ್ಯಪ್ಪ ಕಮ್ಮಾರ, ಬಿ.ಕೆ. ಕೊಪ್ಪದ, ಪಿ.ಎಚ್. ಹಾದ್ರಿಹಳ್ಳಿ, ಹನುಮಂತಪ್ಪ ಸಾಲಿಗೌಡ್ರ, ಪರಮೇಶಪ್ಪ ಮಡಿವಾಳರ, ಶಿವಕುಮಾರ ದೀವಗಿಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಹೆಸ್ಕಾಂ ಇಂಜಿನಿಯರ್ ರಾಜೀವ್ ಮರಿಗೌಡರ, ಮೀಟರ್ ರನ್ನಿಂಗ್ ಮತ್ತು ಯೂನಿಟ್ ಪ್ರಮಾಣ ತಿಳಿಯಲು ಮೀಟರ್ ಅಳವಡಿಸಲಾಗುವುದು. ಆದರೆ, ಹುಲ್ಲತ್ತಿ ಗ್ರಾಮಸ್ಥರ ಮನವಿ ಮೇರೆಗೆ ಪ್ರಸ್ತುತ ಮೀಟರ್ ಅಳವಡಿಕೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net