

ಹಾವೇರಿ: ಕಳೆದ ವರ್ಷ ಅತಿವೃಷ್ಟಿಯಿಂದ ತಾಲೂಕಿನ ಕೋಡಬಾಳ ಗ್ರಾಮದ ಬಸವಣ್ಣಯ್ಯ ಚರಂತಿಮಠ ಅವರ ಮನೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಸಮಿತಿ ಯುವ ಘಟಕದ ತಾಲೂಕು ಅಧ್ಯಕ್ಷ ಲೋಕೇಶ ಕುಬಸದ ಮಾತನಾಡಿ, ಬಸವಣ್ಣೆಯ್ಯ ಚರಂತಿಮಠ ಅವರ ಮನೆ ಸಂಪೂರ್ಣ ಹಾಳಾಗಿದ್ದು, ಇಲ್ಲಿಯವರೆಗೆ ಅವರಿಗೆ ಸೂಕ್ತ ಪರಿಹಾರ ನೀಡಿಲ್ಲ. ಎರಡು ತಿಂಗಳ ಹಿಂದೆ ತಹಸೀಲ್ದಾರ್ ಕಚೇರಿ ಎದುರು ಕುಟುಂಬ ಸಮೇತ ಪ್ರತಿಭಟನೆ ನಡೆಸಲಾಗಿತ್ತು. ಸ್ಪಂದಿಸಿದ ತಹಸೀಲ್ದಾರರು ಗ್ರಾಮಕ್ಕೆ ಭೇಟಿ ನೀಡಿ, ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇನ್ನೂವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕಳೆದ ವರ್ಷದ ಅತಿವೃಷ್ಟಿಯಿಂದ ಮನೆ ಸಂಪೂರ್ಣ ಹಾಳಾಗಿದ್ದರೂ ಅದನ್ನು ಸಿ ಕೆಟಗೆರಿಗೆ ಸೇರಿಸಿ ಕೇವಲ 50 ಸಾವಿರ ರೂ. ಪರಿಹಾರ ಧನ ವಿತರಿಸಿದ್ದಾರೆ. ಇದರಿಂದ ಮನನೊಂದ ಬಸವಣ್ಣೆಯ್ಯ ಅವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗ್ರಾಮಸ್ಥರು ಅವರನ್ನು ರಕ್ಷಿಸಿದ್ದಾರೆ. ಈ ಘಟನೆಯಿಂದಾಗಿ ಅವರು ಮಾನಸಿಕ ಅಸ್ವಸ್ಥರಾಗಿದ್ದು, ವಯಸ್ಸಾದ ತಾಯಿ, ಬುದ್ಧಿಮಾಂದ್ಯ ಮಗಳು ಹಾಗೂ ಪತ್ನಿಯಿದ್ದು ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ. ಕೂಡಲೆ ಜಿಲ್ಲಾಡಳಿತ ಬಸವಣ್ಣಯ್ಯ ಚರಂತಿಮಠ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಸವಣ್ಣೆಯ್ಯ ಚರಂತಿಮಠ ಹಾಗೂ ಕೋಡಬಾಳ ಗ್ರಾಮಸ್ಥರಿದ್ದರು.