

ಕುಮಟಾ: ತಾಲೂಕಿನಲ್ಲಿ ಲಾಕ್ಡೌನ್ ನಿಯಮ ಪಾಲನೆಯ ಜೊತೆಯಲ್ಲಿ ಸರ್ಕಾರದಿಂದ ಮಂಜೂರಾದ ಎಲ್ಲ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮುಂಗಾರು ಆಗಮನಕ್ಕೂ ಮುನ್ನವೇ ಪೂರ್ಣಗೊಳಿಸಲು ಭರದಿಂದ ಕೆಲಸ ನಡೆಯುತ್ತಿದೆ.
ತೊರ್ಕೆ ಪಂಚಾಯಿತಿ ವ್ಯಾಪ್ತಿಯ ಮಳಲಿಯಿಂದ ದೇವರಬಾವಿಗೆ 30 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮುಕ್ತಾಯ ಹಂತದಲ್ಲಿದೆ. ದೇವಣದಲ್ಲಿ ಗುಡ್ಡ ಕುಸಿದ ಜಾಗದಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ 40 ಮೀ ಉದ್ದದ ಕಾಂಕ್ರೀಟ್ನ ಸುರಕ್ಷತಾ ತಡೆಗೋಡೆ ಪೂರ್ಣಗೊಂಡಿದೆ. ಮೊರಬದಲ್ಲಿ 60 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ವಣವಾಗಿದೆ. ಮಿರ್ಜಾನದ ಖೈರೆಕ್ರಾಸ್ನಿಂದ ಅಂತ್ರವಳ್ಳಿ ಮಾರ್ಗದಲ್ಲಿ 1.5 ಕಿ.ಮೀ. ಉದ್ದಕ್ಕೆ ಅಂದಾಜು 1.35 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಕುಮಟಾ ಪಟ್ಟಣದೊಳಗೆ ಬಸ್ತಿಪೇಟೆಯಿಂದ ಮಾಸ್ತಿಕಟ್ಟೆವರೆಗೆ 2.5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಟೈಲ್ಸ್ ಅಳವಡಿಕೆ, ಡಾಂಬರೀಕರಣ ಹಾಗೂ ಗಟಾರ್ ಕಾಮಗಾರಿ ಮೂರ್ನಾಲ್ಕು ದಿನದಲ್ಲಿ ಪೂರ್ಣಗೊಳ್ಳಲಿದೆ. ಹಾಗೆಯೇ ತದಡಿಯಿಂದ ಬೆಲೆಕಾನ ರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮುಕ್ತಾಯ ಹಂತದಲ್ಲಿದ್ದು, ಅಲ್ಲಿಂದ ಮುಂದಕ್ಕೆ ಅಶೋಕೆವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ಮಳೆಗಾಲದೊಳಗೆ ರಸ್ತೆ ಕಾಮಗಾರಿ ನಡೆಯಲಿದೆ.
ರ್ಕಯಲ್ಲಿ ರಸ್ತೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾಗಿ ನನೆಗುದಿಗೆ ಬಿದ್ದಿದ್ದ ಸಾಲಕೋಡದ ಹೊಯ್ನೀರು ಸೇತುವೆ ನಿರ್ವಣದ 2.25 ಕೋಟಿ ರೂ. ವೆಚ್ಚದ ಕಾಮಗಾರಿಯೂ ಮಳೆಗಾಲ ಆರಂಭದೊಳಗೆ ಮುಕ್ತಾಯಗೊಳ್ಳಲಿದೆ. ಕಳೆದ ವರ್ಷ ಅಘನಾಶಿನಿ ನದಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ಬಂಗಣೆ ತೂಗು ಸೇತುವೆಗೆ ಪರ್ಯಾಯವಾಗಿ 2.25 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ಸೇತುವೆ ನಿರ್ಮಾಣ ಕೆಲಸವೂ ಅತ್ಯಂತ ವೇಗವಾಗಿ ನಡೆಯುತ್ತಿದೆ. ವಾರದೊಳಗೆ ಈ ಸೇತುವೆ ಕೆಲಸ ಪೂರ್ಣಗೊಂಡು ಜನ,ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಕೆಲ ಗಜನಿಗಳಲ್ಲಿ ಹಾಳಾದ ಜಂತ್ರಡಿ ದುರಸ್ತಿ, ಒಡೆದ ಖಾರ್ಲೆಂಡ್ ಬಂಡುಗಳ ದುರಸ್ತಿ ಮುಗಿದಿದೆ.
ಪಟ್ಟಣದಲ್ಲಿ ಬಹಳಷ್ಟು ಒಳರಸ್ತೆ ಡಾಂಬರೀಕರಣ ಮುಗಿದಿದೆ. ಗ್ರಾಮೀಣ ಭಾಗದಲ್ಲೂ ಕಳೆದ ವರ್ಷ ಮಳೆಗಾಲದಲ್ಲಿ ಹಾಳಾಗಿದ್ದ ರಸ್ತೆ ಗಳ ದುರಸ್ತಿ, ಮರುಡಾಂಬರೀಕರಣದಂತಹ ಕಾಮಗಾರಿಗಳು ಲಾಕ್ಡೌನ್ ವೇಳೆಯಲ್ಲಿ ನಿರಂತರ ನಡೆದಿದೆ. ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ಸಂಪರ್ಕ ಕೊಂಡಿಯಂತಿರುವ 10ಕ್ಕೂ ಹೆಚ್ಚು ಕಾಲು ಸೇತುವೆಗಳ ನಿರ್ಮಾಣ ಪೂರ್ಣಗೊಳ್ಳಬೇಕಿದೆ. ಮಳೆಗಾಲದೊಳಗೆ ಯೋಜಿತ ಎಲ್ಲ ಕಾಮಗಾರಿಗಳನ್ನೂ ಮುಗಿಸುವ ಸವಾಲು ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ಎದುರಿಗಿದೆ.
ಶಾಸಕರಿಂದ ಕಾಮಗಾರಿ ಪರಿಶೀಲನೆ: ತಾಲೂಕಿನ ಹಲವೆಡೆ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಇಲಾಖೆ ಇಂಜಿನಿಯರರ ಜತೆ ಶಾಸಕ ದಿನಕರ ಶೆಟ್ಟಿ ಶನಿವಾರ ಪರಿಶೀಲಿಸಿದರು. ಈ ವೇಳೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಶಾಸಕರು, ಲಾಕ್ಡೌನ್ ಸಮಯದ ನಿಯಮಗಳನ್ನು ಪಾಲಿಸುತ್ತಲೇ ಮಳೆಗಾಲದೊಳಗೆ ಬಹಳಷ್ಟು ಮಹತ್ವದ ಕಾಮಗಾರಿಗಳನ್ನು ಪೂರ್ಣಗೊಳಿಸಲೇಬೇಕಾದ ಅನಿವಾರ್ಯತೆ ನಮಗಿತ್ತು. ದೊಡ್ಡ ಸೇತುವೆಗಳ ಕೆಲಸ ಮುಗಿಸಬೇಕಿತ್ತು. ಕೆಲಸ ಅರೆಬರೆ ಇರುವಾಗಲೇ ಮಳೆಗಾಲ ಶುರುವಾದರೆ ಜನರಿಗೆ ತೀರಾ ಕಷ್ಟವಾಗುತ್ತಿತ್ತು. ಎಲ್ಲೆಡೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಲಾಗಿದ್ದು, ಗುಣಮಟ್ಟವನ್ನೂ ಕಾಯ್ದುಕೊಳ್ಳಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ಆಗಬೇಕಿದ್ದು ಮುಂಗಾರು ಪ್ರವೇಶದ ಒಳಗೆ ಮುಗಿಸುವ ವಿಶ್ವಾಸವಿದೆ ಎಂದರು.
ಈ ವೇಳೆ ಪಿಡಬ್ಲು ್ಯ ಇಂಜಿನಿಯರ್ ಶಶಿಕಾಂತ ಕೊಳೇಕರ, ರಾಜು ಶಾನಭಾಗ, ಜಿಪಂ ಇಂಜಿನಿಯರ್ ರಾಮದಾಸ ಗುನಗಿ, ತೊರ್ಕೆಯ ಆನಂದ ಕವರಿ, ಮಹೇಶ ನಾಯ್ಕ, ವೆಂಕಟ್ರಮಣ ಕವರಿ, ಕುಮಾರ ಕವರಿ, ತದಡಿ-ಬೆಲೆಕಾನದ ಮಹೇಶ ನಾಯ್ಕ, ಗಿರೀಶ ಪಂಡಿತ, ದಯಾನಂದ ನಾಯಕ, ಸಿ.ಟಿ. ನಾಯ್ಕ, ಉದ್ಯಮಿ ಸುಧೀರ ಪಂಡಿತ ಇನ್ನಿತರರು ಇದ್ದರು.