

ಜೊಯಿಡಾ: ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ತಹಸೀಲ್ದಾರ್ ಸಂಜಯ ಕಾಂಬಳೆ ಮತ್ತು ಸಿಪಿಐ ಬಾಬಾಸಾಹೇಬ ಹುಲ್ಲಣ್ಣನವರ ನೇತೃತ್ವದಲ್ಲಿ ಕರೊನಾ ಬಗ್ಗೆ ಜನಜಾಗೃತಿ ಜಾಥಾ ನಡೆಯಿತು.
ತಹಸೀಲ್ದಾರ್ ಸಂಜಯ ಕಾಂಬಳೆ ಮಾತನಾಡಿ, ಕರೊನಾ ಬಗ್ಗೆ ಸಾರ್ವಜನಿಕರು ಭಯಪಡಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕರೊನಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹರಡುವ ಕಾರ್ಯ ಮಾಡಬಾರದು ಎಂದರು.
ಸಿಪಿಐ ಬಾಬಾ ಸಾಹೇಬ ಹುಲ್ಲಣ್ಣನವರ ಮಾತನಾಡಿ, ಜೊಯಿಡಾ ಒಂದು ಪ್ರವಾಸಿ ತಾಣ. ಇಲ್ಲಿಂದ ಉದ್ಯೋಗಕ್ಕಾಗಿ ಹೊರ ಹೋದವರು ಸಾಕಷ್ಟು ಜನರಿದ್ದಾರೆ. ಇಲ್ಲಿಗೆ ಹೊರಗಿನಿಂದ ಬರುವ ಜನರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಕರೊನಾ ತಡೆಗಟ್ಟುವಲ್ಲಿ ಜನರ ಸಹಕಾರ ತುಂಬಾ ಅಗತ್ಯವಿದೆ ಎಂದರು.ಪೊಲೀಸ್, ಅಗ್ನಿಶಾಮಕ, ಅರಣ್ಯ ಇಲಾಖೆ ಮತ್ತು ಕೆಪಿಸಿ ಭದ್ರತಾ ಇಲಾಖೆಗಳ 100ಕ್ಕೂ ಹೆಚ್ಚು ಸಿಬ್ಬಂದಿ ಜಾಗೃತಿ ಜಾಥಾ ನಡೆಸಿದರು. ಇದೇ ವೇಳೆ ಎಸಿ ಪ್ರಿಯಾಂಗಾ ಭೇಟಿ ನೀಡಿ, ಜೊಯಿಡಾದಲ್ಲಿ ವಿವಿಧ ಇಲಾಖೆಗಳಿಂದ ಜನಜಾಗೃತಿ ನಡೆಸುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕಾಂಚಿಕಾಂಬಾ ದೇವಿಯ ವಾರ್ಷಿಕ ರಥೋತ್ಸವ ರದ್ದು
ಕುಮಟಾ: ತಾಲೂಕಿನ ಬಾಡ ಗುಡೇಅಂಗಡಿಯಲ್ಲಿ ಏ. 8ರಂದು ನಡೆಯಬೇಕಿದ್ದ ಶ್ರೀ ಕಾಂಚಿಕಾಂಬಾ ದೇವಿಯ ವಾರ್ಷಿಕ ರಥೋತ್ಸವ ಜಾತ್ರೆಯನ್ನು ಕರೊನಾ ಲಾಕ್ಡೌನ್ ನಿಮಿತ್ತ ರದ್ದುಪಡಿಸಲಾಗಿದೆ. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತೇರು- ಜಾತ್ರೆ ನಡೆಸಲು ಸಾಧ್ಯವಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಸ್ಥಾನದ ಆಡಳಿತಾಧಿಕಾರಿ ಅಜಿತ್ ಎಂ. ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.