ಭತ್ತದ ಬೆಳೆಗೆ ಅಟಕಾಯಿಸಿದ ಬೆಂಕಿ ಬಾಧೆ

26sdp1
Published on

ಶಿರಸಿ: ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದೇ ಇರುವುದರಿಂದಾಗಿ ತಾಲೂಕಿನ ಪೂರ್ವ ಭಾಗದ ಕಾಳಂಗಿ, ಸಂತೊಳ್ಳಿ, ಕಿರವತ್ತಿ, ಹೆಬ್ಬತ್ತಿ ಹಾಗೂ ಇತರ ಗ್ರಾಮಗಳ ರೈತರು ಲಭ್ಯವಿರುವ ನೀರನ್ನು ಆಶ್ರಯಿಸಿ ಅಂದಾಜು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಭತ್ತದ ಗದ್ದೆಗಳು ಚಿಗುರೊಡೆದು ಬೆಳೆಯುವ ಹಂತದಲ್ಲೇ ಮಳೆ ಕೊರತೆಯಿಂದಾಗಿ ಬೆಂಕಿ ರೋಗಕ್ಕೆ ತುತ್ತಾಗಿವೆ. ನಿತ್ಯ ಹತ್ತಾರು ಎಕರೆ ಪ್ರದೇಶಕ್ಕೆ ವಿಸ್ತರಿಸುವ ಬೆಂಕಿ ರೋಗ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ನಾಟಿ ಮಾಡಿದ ಗದ್ದೆಗಳ ಎಲೆಗಳ ಮೇಲೆ ಕಂದು ಬಣ್ಣದ ಶಂಕಾಕೃತಿ ಅಥವಾ ವಜ್ರಾಕೃತಿ ಆಕಾರದ ಚುಕ್ಕೆಗಳು ಕಂಡುಬಂದಿವೆ. ರಾತ್ರಿ ವೇಳೆ ಕಡಿಮೆ ಉಷ್ಣಾಂಶ ಹಾಗೂ ಹೆಚ್ಚಿನ ತೇವಾಂಶದಿಂದ ರೋಗದ ತೀವ್ರತೆ ಹೆಚ್ಚಾಗಿ ಎಲೆಗಳ ಮೇಲೆ ಉಂಟಾದ ಕಂದು ಚುಕ್ಕಿಗಳು ಒಂದಕ್ಕೊಂದು ಸೇರಿ ಇಡೀ ಎಲೆ ಒಣಗಿ ಸುಟ್ಟಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸಸಿ ಬಲಿತಂತೆ ಗಣ್ಣು ಬಾಧೆಗೆ ಒಳಗಾಗಿ ಗಣ್ಣಿನ ಮೇಲ್ಭಾಗ ಸಾಯುತ್ತದೆ. ಪ್ರಸ್ತುತ ಔಷಧ ಸಿಂಪಡಣೆ ಮಾಡಿದರೂ ರೋಗ ಉಲ್ಬಣಿಸುತ್ತಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ನೀರಾವರಿ ಜಮೀನಿನಲ್ಲಿ ಭತ್ತವನ್ನು ನಾಟಿ ಮಾಡಿದ ರೈತರು ಬೆಂಕಿ ರೋಗದ ಪರಿಣಾಮ ಗದ್ದೆಗಳಿಗೆ ನೀರು ಹಾಯಿಸಬೇಕಾದ ಸಂದರ್ಭ ಎದುರಾಗಿದೆ. ಆದರೆ, ಸಮರ್ಪಕ ವಿದ್ಯುತ್ ಪೂರೈಕೆ ಆಗದ ಹಿನ್ನೆಲೆಯಲ್ಲಿ ಸರಿಯಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದಾಗಿ ಭತ್ತದ ಬೆಳೆಗಾರ ಶಿವನಗೌಡ ಎಸ್. ಹೇಳುತ್ತಾರೆ.

ಬೆಂಕಿ ರೋಗ ನಿಯಂತ್ರಣಕ್ಕೆ ಟ್ರೈಸೈಕ್ಲೋಜೋಲ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಔಷಧವನ್ನು ಮಿಶ್ರಣ ಮಾಡಿ 200-250 ಲೀಟರ್ ದ್ರಾವಣವನ್ನು ಪ್ರತಿ ಎಕರೆಗೆ ಸಿಂಪರಣೆ ಮಾಡಬೇಕು. ಇಲ್ಲವೆ, ರೋಗದ ಲಕ್ಷಣ ಕಂಡು ಬಂದ ತಕ್ಷಣ ಗದ್ದೆಗಳಲ್ಲಿ ನಿಂತ ನೀರನ್ನು ಸಂಪೂರ್ಣ ಬಸಿಯಬೇಕು. ಅಧಿಕ ಸಾರಯುಕ್ತ ರಸಗೊಬ್ಬರಗಳನ್ನು ನೀಡಬಾರದು. | ಮಧುಕರ ನಾಯ್ಕ ಕೃಷಿ ಇಲಾಖೆ ಅಧಿಕಾರಿ

ಕೃಷಿ ಚಟುವಟಿಕೆಗೆ ಹಿನ್ನಡೆ

ಸಿದ್ದಾಪುರ: ತಾಲೂಕಿನಲ್ಲಿ ವಾಡಿಕೆಗಿಂತ ಶೇ.15ರಷ್ಟು ಮಳೆ ಕೊರತೆ ಆಗಿದೆ. ಪರಿಣಾಮ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಬಿರು ಬಿಸಿಲಿನಿಂದ ಕೃಷಿಕರು ಬೆವರುವಂತಾಗಿದೆ.

ವಾಡಿಕೆಯಂತೆ ತಾಲೂಕಿನಲ್ಲಿ ಇಂದಿನವರೆಗೆ 1678ಮಿ.ಮೀ. ಮಳೆ ಆಗಬೇಕಾಗಿತ್ತು. ಆದರೆ, 1439ಮಿ.ಮೀ. ಮಾತ್ರ ಮಳೆ ಬಿದ್ದಿದ್ದು ಶೇ.15ರಷ್ಟು ಮಳೆ ಕಡಿಮೆ ಆಗಿದೆ. ಕೊಂಡ್ಲಿ ಹೋಬಳಿಯಲ್ಲಿ (ವಾಡಿಕೆ ಮಳೆ 1678ಮಿ.ಮೀ.) 1253ಮಿ.ಮೀ.ಮಾತ್ರ ಮಳೆಯಾಗಿದ್ದು, ಶೇ.25ರಷ್ಟು ಕಡಿಮೆಯಾಗಿದೆ. ಕೋಡ್ಕಣಿ ಹೋಬಳಿಯಲ್ಲಿ (ವಾಡಿಕೆ ಮಳೆ 1796 ಮಿ.ಮೀ.) 1614 ಮಿ.ಮೀ.ಮಳೆ ಬಿದ್ದಿದೆ. ಉಂಬಳಮನೆ ಹೋಬಳಿಯಲ್ಲಿ (ವಾಡಿಕೆ ಮಳೆ 2343 ಮಿ.ಮೀ.) 1356 ಮಿ.ಮೀ.ಮಾತ್ರ ಮಳೆ ಬಿದ್ದು ಶೇ.42ರಷ್ಟು ಮಳೆ ಕೊರತೆ ಆಗಿದೆ. ತಾಲೂಕಿನಲ್ಲಿ 5965 ಹೆಕ್ಟೇರ್ ಭತ್ತದ ಕ್ಷೇತ್ರ ಇದ್ದು ಅದರಲ್ಲಿ 230 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಹಾಗೂ 2350 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾರ್ಯಪೂರ್ಣಗೊಂಡಿದೆ.

ತಾಲೂಕಿನ ಹೆಚ್ಚು ಭತ್ತ ಬೆಳೆಯುವ ಕವಂಚೂರು, ನೆಜ್ಜೂರು, ಅರೆಂದೂರು, ಮಳಲವಳ್ಳಿ, ಅಕ್ಕುಂಜಿ, ಹಲಗೇರಿ, ಮನಮನೆ ಮತ್ತಿತರ ಕಡೆಗಳಲ್ಲಿ ನಾಟಿ ಮುಗಿದಿದೆ. ಈಗ ಅಂತಹ ಪ್ರದೇಶದಲ್ಲಿ ನೀರಿನ ಕೊರತೆಯಿಂದ ಗದ್ದೆಗಳು ಒಣಗುವಂತಾಗಿದೆ.

ತಾಲೂಕಿನಲ್ಲಿ ಮಳೆ ಕೊರತೆ ಉಂಟಾಗಿರುವುದರಿಂದ ಕೃಷಿ ಕೆಲಸಕ್ಕೆ ತೊಂದರೆ ಉಂಟಾಗಿದೆ. ಅತಿ ಹೆಚ್ಚು ಮಳೆ ಬೀಳಬೇಕಾದ ಉಂಬಳಮನೆ ಹೋಬಳಿಯಲ್ಲಿ ಶೇ.42ರಷ್ಟು ಮಳೆ, ಕೊಂಡ್ಲಿ ಹೋಬಳಿಯ ಬೇಡ್ಕಣಿ, ಹಲಗೇರಿ ಸುತ್ತಮುತ್ತ ಮಳೆ ಕೊರತೆ ಆಗಿರುವುದರಿಂದ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. | ಪ್ರಶಾಂತ ಜಿ.ಎಸ್. ಕೃಷಿ ಅಧಿಕಾರಿ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net