ಭತ್ತದ ನಾಟಿ ಬಲು ಜೋರು

7-RNR-01
Published on

ರಾಣೆಬೆನ್ನೂರ: ಕಳೆದ 2019ರ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಭತ್ತದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ಅನ್ನದಾತರು ಇದೀಗ ಬೇಸಿಗೆಯಲ್ಲಿ ತುಂಗಭದ್ರಾ ನದಿ ನೀರು ನಂಬಿಕೊಂಡು ಮತ್ತೆ ಭತ್ತ ನಾಟಿಗೆ ಮುಂದಾಗಿದ್ದಾರೆ.

ತಾಲೂಕಿನ ತುಂಗಭದ್ರಾ ಮತ್ತು ಕುಮಧ್ವತಿ ನದಿ ಪಾತ್ರದಲ್ಲಿರುವ ತುಮ್ಮಿನಕಟ್ಟಿ, ಲಿಂಗದಹಳ್ಳಿ, ಮುಷ್ಟೂರು, ನಂದಿಹಳ್ಳಿ, ಸಣ್ಣಸಂಗಾಪುರ, ಹೊಳೆ ಹಾಲಗೇರಿ, ಕೊಡಿಹಾಳ, ಐರಣಿ, ಹಿರೇಬಿದರಿ, ಮೇಡ್ಲೇರಿ, ಬೇಲೂರು, ಉದಗಟ್ಟಿ ಸೇರಿ 40ಕ್ಕೂ ಅಧಿಕ ಗ್ರಾಮಗಳ ರೈತರು ಬಿಡುವಿಲ್ಲದಂತೆ ಭತ್ತದ ನಾಟಿ ಮಾಡುತ್ತಿದ್ದಾರೆ.

ಈ ಬಾರಿ ಉತ್ತರ ಕನ್ನಡ ಭಾಗದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ತುಂಗಭದ್ರಾ ಹಾಗೂ ಕುಮಧ್ವತಿ ನದಿಗಳು ಈಗಲೂ ತುಂಬಿ ಹರಿಯುತ್ತಿದ್ದು, ರೈತರ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಿದೆ. ನೀರಾವರಿ ಆಧರಿಸಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಈಗ ಗದ್ದೆಗಳಲ್ಲಿ ಭತ್ತದ ನಾಟಿ ಮಾಡುವ ಕಾರ್ಯವನ್ನು ನಡೆಸಿದ್ದಾರೆ.

ಮೊನಾಲಿ ಸೋನಾ, ಶ್ರೀರಾಮ ಸೋನಾ, ನಲ್ಲೂರು, ಕಾವೇರಿ ಸೇರಿ ವಿವಿಧ ಬಗೆಯ ಭತ್ತದ ಸಸಿಗಳನ್ನು ನಾಟಿ ಮಾಡುತ್ತಿದ್ದಾರೆ. ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಜನವರಿ ಕೊನೆಯ ವಾರದಿಂದ ಫೆಬ್ರವರಿ ಕೊನೆಯ ವಾರದವರೆಗೆ ಭತ್ತ ನಾಟಿ ಮಾಡಲು ಸೂಕ್ತ ಸಮಯ. ಈ ಸಮಯದಲ್ಲಿ ನಾಟಿ ಮಾಡುವ ಕಾರ್ಯ ಪೂರ್ಣಗೊಳಿಸಿದರೆ, ಮುಂದಿನ ಮೂರು ತಿಂಗಳಲ್ಲಿ ಉತ್ತಮ ಫಸಲು ಬಂದು ಪೈರು ಕಟಾವಿಗೆ ಅನುಕೂಲಕರವಾಗುತ್ತದೆ ಎಂಬುದು ರೈತರ ಅಭಿಪ್ರಾಯ.

ಶ್ರೀರಾಮ ಸೋನಾಗೆ ಬೇಡಿಕೆ: ಮೊನಾಲಿ ಸೋನಾ ಹಾಗೂ ಶ್ರೀರಾಮ ಸೋನಾ ಭತ್ತವನ್ನು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬಿಸಿಲಿನ ಪ್ರಖರತೆ ಹಾಗೂ ನದಿ ನೀರಿನ ಬಳಕೆಯಿಂದ ಭತ್ತವು ಅಚ್ಚುಕಟ್ಟಾಗಿ ಬೆಳೆದು, ಅಕ್ಕಿ ಕೂಡ ರುಚಿಕಟ್ಟಾಗಿರುತ್ತದೆ. ಹೀಗಾಗಿ ಆಂಧ್ರ, ಮಹಾರಾಷ್ಟ್ರ ಹಾಗೂ ದಾವಣಗೆರೆ, ಶಿವಮೊಗ್ಗ, ಶಿಕಾರಿಪುರಗಳಲ್ಲಿ ಇಲ್ಲಿಯ ಭತ್ತಕ್ಕೆ ಬಾರಿ ಬೇಡಿಕೆಯಿದೆ.

ಲಾಭದಾಯಕ ಕೃಷಿ

ವರ್ಷಕ್ಕೆ ಎರಡು ಬಾರಿ ಬರುವ ಭತ್ತದ ಬೆಳೆ ಲಾಭದಾಯಕ ಕೃಷಿ. 1 ಎಕರೆಗೆ 8 ಸಾವಿರ ರೂ.ಯಿಂದ 10 ಸಾವಿರ ರೂ. ಖರ್ಚು ಬರುತ್ತದೆ. ಎಕರೆಗೆ 25ರಿಂದ 28 ಕ್ವಿಂಟಾಲ್ ಇಳುವರಿಯಿದೆ. ಅದೇ ರೀತಿ ಮಾರುಕಟ್ಟೆ ಬೆಲೆ ಕ್ವಿಂಟಾಲ್​ಗೆ 1060 ರೂ.ಯಿಂದ 13 ಸಾವಿರ ರೂ. ವರೆಗೂ ನಡೆಯುತ್ತಿದೆ. ಹೀಗಾಗಿ ಈ ಭಾಗದ ರೈತರು ಭತ್ತದ ಬೆಳೆ ಬೆಳೆಯಲು ಉತ್ಸುಕರಾಗಿದ್ದಾರೆ.

4500 ಹೆಕ್ಟೇರ್ ನಾಟಿ ಗುರಿ

ಪ್ರಸಕ್ತ ವರ್ಷದಲ್ಲಿ ತಾಲೂಕಿನಾದ್ಯಂತ 4500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡುವ ಗುರಿ ಹೊಂದಿದ್ದು, ಈಗಾಗಲೇ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಭತ್ತದ ಗದ್ದೆಗೆ ನೀರು, ವಿದ್ಯುತ್ ಕೂಡ ಸಮರ್ಪಕವಾಗಿದೆ. ಹೀಗಾಗಿ ಉತ್ತಮ ಫಸಲು ಬರುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ‘ವಿಜಯವಾಣಿ’ಗೆ ತಿಳಿಸಿದರು.

ಕಳೆದ ವರ್ಷ ಭತ್ತದ ಪೈರು ಕೈಗೆ ಬರುವ ಸಮಯದಲ್ಲಿಯೇ ಹೆಚ್ಚಿನ ಮಳೆ ಸುರಿದ ಪರಿಣಾಮ ಬೆಳೆ ಹಾನಿ ಜತೆಗೆ ಭೂಮಿ ಸಹ ಹದ ಕಳೆದುಕೊಂಡಿತ್ತು. ನಂತರದ ದಿನದಲ್ಲಿ ಬಿಸಿಲು ಉತ್ತಮವಾಗಿ ಬಿದಿದ್ದರಿಂದ ಮತ್ತೆ ಭೂಮಿ ಹದಗೊಳಿಸಿ ಭತ್ತ ನಾಟಿ ಮಾಡುತ್ತಿದ್ದೇವೆ. ನದಿಯಲ್ಲಿ ನೀರಿನ ಹರಿವು ಹಾಗೂ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾದರೆ, ಉತ್ತಮ ಬೆಳೆ ಬರಲಿದೆ. | ಗದಿಗೆಪ್ಪ ಪಾಳೇದ, ತುಮ್ಮಿನಕಟ್ಟಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net