ಭತ್ತದ ಕೃಷಿ ಚಟುವಟಿಕೆ ಚುರುಕು

29spt1
Published on

ಸೋಮವಾರಪೇಟೆ: ಅತಿ ಹೆಚ್ಚು ಮಳೆಯಾಗುವ ಗರ್ವಾಲೆ ಗ್ರಾಮ ಪಂಚಾಯಿತಿ ಪುಷ್ಪಗಿರಿ ತಪ್ಪಲು ಗ್ರಾಮಗಳ ಜನರು ಮಳೆಯಿಂದ ತತ್ತರಿಸಿದ್ದರೂ ಭತ್ತದ ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದಲೇ ನಿರತರಾಗಿದ್ದಾರೆ.

ಪಂಚಾಯಿತಿ ವ್ಯಾಪ್ತಿಯ ಗಾಮಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ 120 ಇಂಚಿನಷ್ಟು ಮಳೆ ಸುರಿದಿದೆ. ಕೃಷಿಕರ ಭತ್ತ ಸಸಿ ಮಡಿಗಳು ನಾಟಿಗೆ ಸಿದ್ಧವಾಗಿವೆ.

ಶನಿವಾರ, ಭಾನುವಾರ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಉಳುಮೆ ಮಾಡಿದ್ದ ಗದ್ದೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ತೋಡು, ಕೊಲ್ಲಿಗಳಲ್ಲೂ ನೀರಿನ ಹರಿವು ಕಡಿಮೆಯಾಗಿರುವುದರಿಂದ ನಾಟಿ ಮಾಡಲು ಉಪಯೋಗವಾಗಿದೆ ಎಂದು ಕುಂಬಾರಗಡಿಗೆ ಗ್ರಾಮದ ಭತ್ತ ಬೆಳೆಗಾರ ಕನ್ನಿಗಂಡ ಪಳಂಗಪ್ಪ ಹೇಳಿದರು.

ಮಳೆಗಾಲದಲ್ಲಿ ಬಹುತೇಕ ಗ್ರಾಮಗಳಿಗೆ ರಸ್ತೆಯ ಸೌಲಭ್ಯವಿಲ್ಲ. ಕಚ್ಚಾ ರಸ್ತೆಯಲ್ಲೇ ತೆರಳಬೇಕಾಗಿದೆ. ಮಳೆಗಾಲದಲ್ಲಿ ಫೋರ್ ವ್ಹೀಲ್ ವಾಹನಗಳು ಮಾತ್ರ ಸಂಚರಿಸುತ್ತವೆ. ತಲೆ ಹೊರೆಯಲ್ಲೇ ಕೃಷಿ ಉಪಕರಣಗಳನ್ನು ಸಾಗಿಸಬೇಕಿದೆ. ಈಚೆಗೆ ಸುರಿದ ಮಳೆಯಿಂದ ಮರಗಳು ವಿದ್ಯುತ್ ಮಾರ್ಗದ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ಮಾರ್ಗಗಳು ಹಾಳಾಗುತ್ತಿವೆ. ಅನೇಕ ಕಡೆ ಗ್ರಾಮಸ್ಥರೇ ಮರಗಳನ್ನು ಕಡಿದು ವಿದ್ಯುತ್ ಮಾರ್ಗ ಸರಿಪಡಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆಎಣ್ಣೆ ಕೊಡದ ಹಿನ್ನೆಲೆಯಲ್ಲಿ ಅನೇಕ ಬಡ ಕುಟುಂಬಗಳು ಕತ್ತಲೆಯಲ್ಲೇ ರಾತ್ರಿ ಕಳೆಯಬೇಕಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಸೂರ್ಲಬ್ಬಿ, ಮಂಕ್ಯಾ, ಗರ್ವಾಲೆ, ಕಿಕ್ಕರಳ್ಳಿ, ಮೂವತ್ತೊಕ್ಲು ಗ್ರಾಮಗಳಲ್ಲಿ ವಾರ್ಷಿಕವಾಗಿ 300ರಿಂದ 400 ಇಂಚು ಮಳೆಯಾಗುತ್ತದೆ. ಪ್ರತಿವರ್ಷವೂ ಕಾಫಿ, ಏಲಕ್ಕಿ, ಕಾಳುಮೆಣಸು ಫಸಲು ಮಳೆಯಲ್ಲಿ ಹಾನಿಯಾಗುತ್ತದೆ. ಕಾಡಾನೆ, ಕಾಡುಕೋಣ, ಕಾಡುಹಂದಿಗಳ ಕಾಟವಿದ್ದರೂ ಭತ್ತ ಬೆಳೆಯುವುದನ್ನು ಕೃಷಿಕರು ನಿಲ್ಲಿಸಿಲ್ಲ.

ಈ ಗ್ರಾಮಗಳ ಕೃಷಿಕರಿಗೆ ಸದ್ಯಕ್ಕೆ ಭತ್ತವೇ ಜೀವನಾಧಾರ ಬೆಳೆಯಾಗಿದೆ. ಪ್ರತಿವರ್ಷ ಧಾರಾಕಾರ ಮಳೆಯಿಂದ ಫಸಲು ಹಾನಿಯಾಗುತ್ತಿದೆ. ಕಾಡುಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳುವಂತ ಪರಿಸ್ಥಿತಿ ಇದೆ. ಜಮ್ಮಾ ಆಸ್ತಿ ಹಿಡುವಳಿ ಇರುವುದರಿಂದ ಕೃಷಿಕರಿಗೆ ಆಸ್ತಿ ದಾಖಲಾತಿಗಳ ಸಮಸ್ಯೆಯಿದೆ. ದಾಖಲಾತಿ ಸಮಸ್ಯೆಯಿಂದ ಮಳೆಹಾನಿ ಪರಿಹಾರ ಹಾಗೂ ಸರ್ಕಾರ ಸೌಲಭ್ಯಗಳು ಬಹುತೇಕ ರೈತರಿಗೆ ಸಿಗುತ್ತಿಲ್ಲ. ಕಂದಾಯ ಇಲಾಖೆಯೂ ತಲೆಕಡಿಸಿಕೊಂಡಿಲ್ಲ. ರೈತರು ಬಡತನದಲ್ಲೇ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ರಸಾಯನಿಕ ಗೊಬ್ಬರ, ಕೀಟನಾಶಕಗಳ ಬೆಲೆ ಗಗನಕ್ಕೇರಿ ಉತ್ಪಾದನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚಿನ ಹೋಬಳಿಗಳಲ್ಲಿ ಕೃಷಿಕರು ಗದ್ದೆ ಭೂಮಿಯನ್ನು ಸಮತಟ್ಟು ಮಾಡಿ ತೋಟಗಾರಿಕಾ ಬೆಳೆಯನ್ನು ಬೆಳೆಯುತ್ತಿರುವ ಸಂದರ್ಭದಲ್ಲಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳಲ್ಲಿ ಹವಾಮಾನ ವೈಪರೀತ್ಯ, ಅಕಾಲಿಕ ಮಳೆಗೆ ಸೆಡ್ಡು ಹೊಡೆದು ಭತ್ತ ಕೃಷಿಯನ್ನು ಮುಂದುವರಿಸಿದ್ದಾರೆ.

ಅತಿಯಾದ ಮಳೆಯಿಂದ ಕಾಫಿ ಕೊಳೆರೋಗ ಬಂದು ಉದುರಿಹೋಗುತ್ತದೆ. ರೋಗಬಾಧೆಯಿಂದ ಏಲಕ್ಕಿ ಫಸಲು ಸಿಗುತ್ತಿಲ್ಲ. ಭತ್ತ, ತರಕಾರಿ ಬೆಳೆಯುತ್ತೇವೆ. ಕೃಷಿಗೆ ಪ್ರೋತ್ಸಾಹಧನ ಇಲ್ಲದ ಕಾರಣ ಯುವಕರ, ಯುವತಿಯರು ನಗರ, ಪಟ್ಟಣದಲ್ಲಿ ಸಣ್ಣ ಪುಟ್ಟ ನೌಕರಿ ಮಾಡಿಕೊಂಡಿದ್ದಾರೆ. ತಂದೆ, ತಾಯಿ ಮತ್ತು ವೃದ್ಧರು ಗ್ರಾಮ ಮನೆಗಳಲ್ಲಿ ವಾಸವಾಗಿದ್ದಾರೆ. ಸರ್ಕಾರ ಮಳೆಗಾಲದಲ್ಲಿ ಕೃಷಿಕರಿಗೆ ಉಚಿತ ಆಹಾರ ಕಿಟ್‌ಗಳನ್ನು ಸರಬರಾಜು ಮಾಡಬೇಕು. ಸಕಾಲದಲ್ಲಿ ಪಡಿತರ ಸರಬರಾಜು ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ, ಅತೀ ಶೀಘ್ರ ದುರಸ್ತಿಗೊಳಿಸಿ ವಿದ್ಯುತ್ ನೀಡಬೇಕು. ಕಂದಾಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು ಎಂದು ರೈತ ಮಹಿಳೆ ಸೂರ್ಲಬ್ಬಿಯ ಜಯಂತಿ ಹೇಳಿದರು.

ಅಲ್ಲಿನ ಅನೇಕ ಗ್ರಾಮಗಳಿಗೆ ಡಾಂಬರು ರಸ್ತೆಯಿಲ್ಲ. ಕೃಷಿ ಭೂಮಿಗೆ ರಸ್ತೆಗಳಿಲ್ಲ. ಕುಂಬಾರಗಡಿಗೆ ಗ್ರಾಮಕ್ಕೆ ಕಚ್ಚಾರಸ್ತೆ ಮಾತ್ರ ಇದೆ. ಟಿಲ್ಲರ್, ಟ್ರಾೃಕ್ಟರ್‌ಗಳು ಗದ್ದೆಭೂಮಿಗೆ ತೆರಳದ ಹಿನ್ನೆಲೆಯಲ್ಲಿ ಯಂತ್ರಗಳಿಂದ ಉಳುಮೆ ಮಾಡಲು ಸಾಧ್ಯವಿಲ್ಲ. ಜೋಡೆತ್ತುಗಳನ್ನು ಉಪಯೋಗಿಸಿ ಉಳುಮೆ ಮಾಡಿ ನಾಟಿ ಮಾಡುತ್ತಾರೆ. ಆರ್ಥಿಕ ಸಮಸ್ಯೆ ಹಾಗೂ ಕಾರ್ಮಿಕರ ಕೊರತೆಯಿಂದ ಕುಟುಂಬಸ್ಥರೇ ಸೇರಿಕೊಂಡು ಗದ್ದೆ ಕೆಲಸ ಮಾಡುತ್ತಾರೆ. ತಾಲೂಕಿನ ಮಟ್ಟಿಗೆ ಮೊದಲು ಭತ್ತ ನಾಟಿ ಕೆಲಸ ಮುಗಿಸುವುದು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಎಂದು ರೈತರು ಹೇಳಿದರು.

ಭತ್ತ ನಾಟಿ ಕೆಲಸ ಮುಗಿದ ಮೇಲೆಯೂ ಮಳೆ ಸುರಿದು, ನಾಟಿ ಮಾಡಿದ ಗದ್ದೆಯ ಮೇಲೆ ನೀರು ಸಂಗ್ರಹವಾಗಿ ಸಸಿ ಕೊಳೆತು ಫಸಲು ಹಾನಿಯಾಗುತ್ತದೆ. ಕೆಲವೊಮ್ಮೆ ಗದ್ದೆಯಲ್ಲಿ ಹೂಳು ಸಂಗ್ರಹವಾಗುತ್ತದೆ. ಭತ್ತದ ಹಣ್ಣಾಗುವ ಸಂದರ್ಭದಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತದೆ. ಎಷ್ಟೇ ನಷ್ಟವಾದರೂ ಭತ್ತ ಬೆಳೆಯುವುದನ್ನು ನಿಲ್ಲಿಸಿಲ್ಲ. ವರ್ಷವಿಡೀ ಊಟಕ್ಕಾಗಿಯಾದರೂ ಭತ್ತ ಬೆಳೆಯಲೇಬೇಕು. ಬೆಳೆ ಹಾನಿಯಾದಾಗ ನಿಯಮ ಸರಳೀಕರಣಗೊಳಿಸಿ ಪರಿಹಾರ ನೀಡಬೇಕು. ಭತ್ತ ಕೃಷಿಗೆ ಎಕರೆಗೆ 25 ಸಾವಿರ ರೂ.ಸಹಾಯಧನವನ್ನು ಸರ್ಕಾರ ನೀಡಲೇಬೇಕು. ಲೋಕೇಶ್, ಕೃಷಿಕ, ಗರ್ವಾಲೆ ಗ್ರಾಮ ಗರ್ವಾಲೆ ಗ್ರಾಮ ಪಂಚಾಯಿತಿಯಲ್ಲಿ ಪ್ರಗತಿಪರ ರೈತರಿದ್ದಾರೆ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಕೃಷಿ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ಬಿತ್ತನೆ ಬೀಜ ಪಡೆದುಕೊಳ್ಳಲು ಹೇಳಿದ್ದೇವೆ. ಅನೇಕ ಬಿತ್ತನೆ ಬೀಜ ತೆಗೆದುಕೊಂಡು ಸಸಿಮಡಿ ಮಾಡಿದ್ದಾರೆ. ಕೆಲವು ರೈತರ ನಾಟಿ ಕೆಲಸ ಪ್ರಾರಂಭಿಸಿದ್ದಾರೆ. ನಾಟಿ ಮಾಡಿದ ಹದಿನೈದು ದಿನದ ನಂತರ ಕೀಟನಾಶಕಗಳನ್ನು ಕೊಡುತ್ತೇವೆ. ಪ್ರತಿವರ್ಷ ಹೆಚ್ಚಿನ ಆಸಕ್ತಿ ವಹಿಸಿ ಬೆಳೆಹಾನಿ ಪರಿಹಾರ ಕೊಡಿಸಲು ಪ್ರಯತ್ನ ಮಾಡಿದ್ದೇವೆ. ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಫಲಾನುಭವಿಗಳಿಗೆ ಸಿಗುತ್ತಿದೆ. ಕೆ.ಪಿ.ವೀರಣ್ಣ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net