ಭತ್ತದ ಕುಯ್ಲಿನಲ್ಲೇ ಖರೀದಿ ಕೇಂದ್ರ ತೆರೆಯಲಿ

20250308_105006
Published on

ಶ್ರೀರಂಗಪಟ್ಟಣ: ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಸಾಧ್ಯವಾದಷ್ಟು ರೈತರು ಭತ್ತ ಕೊಯ್ಲು ಮಾಡುವ ಸಂದರ್ಭದಲ್ಲೇ ಖರೀದಿ ಕೇಂದ್ರಗಳನ್ನು ತೆರೆದು ಅವರಿಂದ ಧಾನ್ಯಗಳನ್ನು ಸಂಗ್ರಹಣೆ ಮಾಡಿದರೆ ದಳ್ಳಾಳಿಗಳ ಹಾವಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ರಾಜ್ಯ ಸಹಾಕಾರ ಮಾರಾಟ ಮಹಾಮಂಡಳಿ, ಆಹಾರ ಇಲಾಖೆ ಹಾಗೂ ಟಿಎಪಿಸಿಎಂಎಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭತ್ತ ಮತ್ತು ರಾಗಿ ಖರೀದಿ ಕೇಂದ್ರಕ್ಕೆ ರಾಶಿ ಕಣಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.

ಶ್ರೀರಂಗಪಟ್ಟಣ ಕ್ಷೇತ್ರವನ್ನು ಹೇರಳವಾಗಿ ಭತ್ತ ಬೆಳೆಯುವ ಪ್ರದೇಶ ಎಂದೇ ಗುರುತಿಸಲಾಗುತ್ತದೆ. ಕಸಬಾ ಹಾಗೂ ಕೆ.ಶೆಟ್ಟಹಳ್ಳಿ ಹೋಬಳಿಗಳಲ್ಲಿ ಹೆಚ್ಚು ಕಬ್ಬು ಬೆಳೆ ಹೊರತುಪಡಿಸಿ ನಮ್ಮ ಕ್ಷೇತ್ರದಲ್ಲಿರುವ ಪುರಾತನ ನಾಲೆಗಳ ನೀರಿನ ಮೂಲಗಳಿಂದ ಬೆಳಗೊಳ, ಅರಕೆರೆ ಹಾಗೂ ಕೊತ್ತತ್ತಿ ಹೋಬಳಿಗಳಲ್ಲಿ ಹೇರಳವಾಗಿ ಭತ್ತದ ಬೆಳೆಯನ್ನು ರೈತರು ಬೆಳೆಯುತ್ತಾರೆ.

ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಭತ್ತಕ್ಕೆ 2300 ರೂ.ಹಾಗೂ ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂ.ದರ ನಿಗದಿಪಡಿಸಿದೆ. ಆದರೆ ಈಗಾಗಲೇ ಭಾಗಶಃ ಸಾಕಷ್ಟು ರೈತರು ತಮ್ಮ ಫಲವತ್ತಾದ ಜಮೀನಿನಲ್ಲಿ ಕಷ್ಟಪಟ್ಟು ಹಸನಾಗಿ ಬೆಳೆದ ಭತ್ತವನ್ನು ಸಂಗ್ರಹಿಸಲು ಸೂಕ್ತ ಸ್ಥಳವಾಕಾಶ ಹಾಗೂ ಇತರ ಸಮಸ್ಯೆಗಳಿಂದ ಅತೀ ಕಡಿಮೆ ಬೆಲೆಗೆ ರೈಸ್‌ಮಿಲ್ ಹಾಗೂ ಮಧ್ಯವರ್ತಿಗಳಿಗೆ ಮಾರಾಟ ಮಾಡಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ಕೆಲವೇ ರೈತರು ಮಾತ್ರ ತಮ್ಮ ಧಾನ್ಯಗಳನ್ನು ಸಂಗ್ರಹಿಸಿರುವ ಕಾರಣ ಸರ್ಕಾರದ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ರೈತರಿಂದ ಭತ್ತ ಸಂಗ್ರಹಿಸುವ ಕಾರ್ಯವನ್ನು ಡಿಸೆಂಬರ್‌ನಲ್ಲೇ ಸಹಕಾರ ಮಾರಾಟ ಮಂಡಳಿ ಪ್ರಾರಂಭಿಸಬೇಕಿದ್ದು, ಈ ಬಗ್ಗೆ ಸರ್ಕಾರ ಜಾರಿಗೊಳಿಸಿದ್ದರೂ ತಡವಾಗಲು ಕಾರಣವೇನು ತಿಳಿದಿಲ್ಲ. ಈಗಾಗಲೇ ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಆದರೂ ಈ ನಿಟ್ಟಿನಲ್ಲಿ ಮತ್ತೊಮ್ಮೆ ರಾಜ್ಯ ಸರ್ಕಾರದ ಗಮನಸೆಳೆದು ಮುಂದೆ ಸಕಾಲದಲ್ಲೇ ಧಾನ್ಯ ಖರೀದಿ ಕೇಂದ್ರಗಳನ್ನು ತೆರೆಸಿ ರೈತರಿಗೆ ಅನುಕೂಲಗಳೊಂದಿಗೆ ಉತ್ತಮ ದರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್ ಮಾತನಾಡಿ, ಕ್ಷೇತ್ರದಲ್ಲಿ ಪ್ರಸ್ತುತ 173 ರೈತರಿಂದ ಒಟ್ಟು 6114 ಕ್ವಿಂಟಾಲ್ ಭತ್ತಕ್ಕೆ ಮಾತ್ರ ನೋಂದಣಿಯಾಗಿದ್ದು, 335 ಕ್ವಿಂಟಾಲ್ ರಾಗಿ 27 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕು ಎಂದರು.

ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ತಾಲೂಕಿನಲ್ಲಿ ಎರಡು ಕಡೆ ಮಾತ್ರ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪಟ್ಟಣದ ಟಿಎಪಿಸಿಎಂಎಸ್ ಮತ್ತು ತಾಲೂಕಿನ ಅರಕೆರೆ ಹೋಬಳಿ ಕೇಂದ್ರದ ರೈತ ಸಂಪರ್ಕದಲ್ಲಿ ಸೋಮವಾರದಿಂದ ರೈತರು ತಮ್ಮ ಹೆಸರು ನೋಂದಣಿ ಮಾಡಿಸಿ ಭತ್ತ ಮತ್ತು ರಾಗಿ ಧಾನ್ಯಗಳನ್ನು ನೀಡಬಹುದು ಎಂದರು.

ಪುರಸಭೆ ಉಪಾಧ್ಯಕ್ಷ ಎಂ.ಎಲ್.ದಿನೇಶ್, ಸದಸ್ಯ ಎಸ್.ಎನ್.ದಯಾನಂದ್, ಟಿಎಪಿಸಿಎಂಎಸ್ ನಿರ್ದೇಶಕರಾದ ಜಯರಾಜ್, ಶ್ರೀಕಂಠು, ಟಿಎಪಿಸಿಎಂಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ವತಮ್ಮ, ಆಹಾರ ಇಲಾಖೆಯ ಶಿರಸ್ತೇದಾರ್ ರಮಾ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಖರೀದಿ ಕೇಂದ್ರದ ಅಧಿಕಾರಿ ರಾಜಶೇಖರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net