

ಯಲ್ಲಾಪುರ: ತಾಲೂಕಿನ ಕಿರವತ್ತಿ, ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ರೈತರ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಭತ್ತ, ಕಬ್ಬು, ಜೋಳ, ತೆಂಗಿನ ಮರ, ಅಡಕೆ ಮರ, ಬಾಳೆ ಗಿಡಗಳಿಗೆ ಹಾನಿ ಮಾಡಿವೆ.
ಕಳೆದ ಒಂದು ತಿಂಗಳ ಹಿಂದೆ ಒಂಟಿ ಸಲಗ ಕಿರವತ್ತಿ ಹಾಗೂ ಮದನೂರು ಭಾಗದಲ್ಲಿ ಸುತ್ತುತ್ತಿತ್ತು, ಇದೀಗ ಹದಿನೈದು ದಿನಗಳ ಹಿಂದೆ 8-9 ಆನೆಗಳಿರುವ ಎರಡು ಹಿಂಡು ಕಾಣಿಸಿಕೊಂಡಿದೆ. ಒಂದು ಹಿಂಡು ಮುಂಡಗೋಡ ತಾಲೂಕಿನ ಮೈನಳ್ಳಿ, ಗುಂಜಾವತಿ ಗ್ರಾಮಗಳ ಅರಣ್ಯದ ಕಡೆಗೆ ತೆರಳಿದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ.
ಕಿರವತ್ತಿ ಹಾಗೂ ಮದನೂರು ಭಾಗದಲ್ಲಿ ಸಂಚರಿಸುವ ಮತ್ತೊಂದು ಹಿಂಡಿನಲ್ಲಿ ಮೂರು ಮರಿ ಆನೆಗಳಿವೆ ಎಂದು ಹೇಳಲಾಗುತ್ತಿದ್ದು, ಅವು ಕಿರವತ್ತಿ ವಲಯ ಅರಣ್ಯ ವ್ಯಾಪ್ತಿಯ ಕರಡನಕೊಪ್ಪ, ಮದನೂರು, ಮಾದೇಕೊಪ್ಪ, ಅಲ್ಕೇರಿ, ಜೋಗಿಕೊಪ್ಪದ ರೈತರ ಗದ್ದೆ ತೋಟಗಳಿಗೆ ದಾಳಿ ಮಾಡಿವೆ.
ಎರಡು ದಿನಗಳಿಂದೀಚೆಗೆ ಕರಡನಕೊಪ್ಪದಲ್ಲಿ ಗಂಗಾಬಾಯಿ ಗಾಂವ್ಕರ, ಗೋಪಾಲಕೃಷ್ಣ ಗಾಂವ್ಕರ, ಪುಂಡಲೀಕ ಶಿರ್ನಾಳ್ಕರ ಮುಂತಾದ ರೈತರ ತೆಂಗಿನಮರ, ಅಡಕೆ ಮರ, ಬಾಳೆಗಿಡ, ಜೋಳ, ಭತ್ತದ ಗದ್ದೆಯನ್ನು ತುಳಿದು ನಾಶಮಾಡಿವೆ.
ಪರಿಹಾರಕ್ಕೆ ಅತಿಕ್ರಮಣದ್ದೇ ಸಮಸ್ಯೆ: ವನ್ಯಜೀವಿಗಳಿಂದ ರೈತರ ಫಸಲು ಹಾಳಾದಾಗ ಜಿಪಿಎಸ್ ಮೂಲಕ ಸ್ಥಳದಲ್ಲಿಯೇ, ಹಾನಿಯಾದ ಪ್ರದೇಶದ ಫೋಟೋ ತೆಗೆದು ಸಂಪೂರ್ಣ ಮಾಹಿತಿಯನ್ನು ಅರಣ್ಯ ಇಲಾಖೆ ಅಪ್ಲಿಕೇಶನ್ನಲ್ಲಿ ದಾಖಲಿಸಬೇಕು. ಹಾಗೆ ಮಾಡಿದರೆ ಪರಿಹಾರ ನೀಡಲು ವಿಳಂಬವಾಗದು. ಹಾನಿಗೊಳಗಾದ ಪ್ರದೇಶ ಅರಣ್ಯ ಅತಿಕ್ರಮಣವಾಗಿದ್ದರೆ ಜಿಪಿಎಸ್ ಡಾಟಾ ಎಂಟ್ರಿ ತೆಗೆದುಕೊಳ್ಳುವುದಿಲ್ಲ. ಅರಣ್ಯ ಅತಿಕ್ರಮಣದಾರರಿಗೆ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಕಿರವತ್ತಿ, ಮದನೂರು ಭಾಗದಲ್ಲಿ ಹೆಚ್ಚಿನ ರೈತರದು ಅತಿಕ್ರಮಣ ಭೂಮಿಯಾಗಿರುವುದರಿಂದ ಪ್ರತಿ ವರ್ಷ ಕಾಡಾನೆ ಹಾವಳಿಯಿಂದ ಬೆಳೆ ನಾಶವಾದರೂ ಪರಿಹಾರ ಸಿಗದ ಸ್ಥಿತಿಯಿದೆ. ಆನೆಗಳು ಮತ್ತೆ ಆಗಮಿಸುವ ಸಂಭವ ಹೆಚ್ಚಿರುವುದರಿಂದ, ಅತಿಕ್ರಮಣ ಹಾಗೂ ಮಾಲ್ಕಿ ಜಮೀನು ಎಲ್ಲವನ್ನೂ ಒಟ್ಟಿಗೆ ಸೇರಿಸಿ ಸಮೀಕ್ಷೆ ಮಾಡಿ ಇಲಾಖೆಯಿಂದ ಪರಿಹಾರ ಕೊಡಿಸುವ ಕೆಲಸ ಆಗಬೇಕಾಗಿದೆ.
ಈ ಹಿಂದೆ ಅರಣ್ಯ ಇಲಾಖೆಯು ಗದ್ದೆ ಮತ್ತು ಅರಣ್ಯದ ಮಧ್ಯೆ ಎಲಿಫೆಂಟ್ ಟ್ರೆಂಚ್ ಅನ್ನು ತೆಗೆದಿತ್ತು. ಇಷ್ಟೊಂದು ಉದ್ದಗಲದ ಟ್ರೆಂಚ್ ತೆಗೆದಾಗಲೂ ಆನೆಗಳು ಮತ್ತೆ ಮತ್ತೆ ಗದ್ದೆಗಳನ್ನು ಪ್ರವೇಶಿಸುತ್ತಿವೆ. ಆನೆ ಪ್ರವೇಶಿಸುವ ಭಾಗಗಳಲ್ಲೇ ಟ್ರೆಂಚ್ ತೆಗೆದರೆ ಅನುಕೂಲವಾಗುತ್ತದೆ.| ಪುಂಡಲೀಕ ಶೀರ್ನಾಳ್ಕರ ರೈತ