

ಮದ್ದೂರು: ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ’ ಎಂಬ ಗಾದೆ ಮಾತಿನಂತೆ ರೈತರು ತಾಲೂಕಿನಾದ್ಯಂತ ಕಷ್ಟಪಟ್ಟು ಬೆಳೆದಿದ್ದ ಭತ್ತವನ್ನು ಕೊಯ್ಲು ಮಾಡಿದ್ದ ಸಂದರ್ಭದಲ್ಲಿ ದಿನಪೂರ್ತಿ ಮಳೆ ಬಂದು ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡಿದೆ.
ಮದ್ದೂರು ಪಟ್ಟಣ ಹಾಗೂ ತಾಲೂಕಿನ ಹುಗರಲವಾಡಿ, ಗೊಲ್ಲರದೊಡ್ಡಿ, ಮರಳಿಗ, ಕೋಣಸಾಲೆ, ಕೋಡಿದೊಡ್ಡಿ, ಕೊಪ್ಪ, ಗೊರವನಹಳ್ಳಿ ಸೇರಿದಂತೆ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ತಿಂಗಳುಗಟ್ಟಲೆ ಶ್ರಮಿಪಟ್ಟು, ಸಾಲ ಸೋಲ ಮಾಡಿ ಬೆಳೆದು ಕೊಯ್ಲು ಮಾಡಿದ್ದ ಭತ್ತದ ಬೆಳೆ ಮಳೆ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಮರಗುತ್ತಿದ್ದಾರೆ.
ಈ ಬಾರಿ ಉತ್ತಮ ಮಳೆಯಿಂದ ಫಸಲು ತುಂಬಾ ಚೆನ್ನಾಗಿ ಬಂದಿತ್ತು. ಇದರಿಂದ ಒಂದಷ್ಟು ಹಣ ನೋಡಬಹುದು ಎಂದುಕೊಂಡಿದ್ದ ರೈತ ಸಮೂಹಕ್ಕೆ ದಿಢೀರ್ ಎಂದು ಭಾನುವಾರ ರಾತ್ರಿಯಿಂದ ಸೋಮವಾರ ಇಡೀ ದಿನ ಸುರಿದ ಮಳೆಯಿಂದ ಸಂಕಷ್ಟ ತಂದಿಟ್ಟಿದೆ.
ತಾಲೂಕಿನಲ್ಲಿ ಅಂದಾಜು ಶೇ.25ರಿಂದ 30ರಷ್ಟು ರೈತರು ಭತ್ತವನ್ನು ಕೂಯ್ಲು ಮಾಡಿದ್ದರು. ಕೂಯ್ಲು ಮಾಡಿದ್ದ ಭತ್ತ ಗದ್ದೆಯಲ್ಲಿತ್ತು. ಇನ್ನೇನು ಭತ್ತವನ್ನು ಕಂತೆ ಕಟ್ಟಿ ಬಡಿದು ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಬಂದ ಮಳೆರಾಯ ರೈತರನ್ನು ಚಿಂತೆಗೆದೂಡಿದ್ದಾನೆ.
ಇದೇ ರೀತಿ ನಿರಂತರವಾಗಿ ಮಳೆ ಬಂದರೆ ಕೊಯ್ಲು ಮಾಡದಿರುವ ಭತ್ತಕ್ಕೂ ಸಮಸ್ಯೆ ಕಾಡಲಿದೆ. ಆದ್ದರಿಂದ ಸರ್ಕಾರ ಮತ್ತು ಅಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ಸರ್ವೇ ಮಾಡಿಸಿ ಮಳೆಗೆ ಹಾನಿಯಾಗಿರುವ ಭತ್ತಕ್ಕೆ ವೈಜ್ಞಾನಿಕ ಪರಿಹಾರ ಕೊಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.