ಭಟ್ಕಳದಲ್ಲಿ ಬೀಡು ಬಿಟ್ಟ ತಮಿಳುನಾಡಿನವರು

4bk2_Bharat
Published on

ಭಟ್ಕಳ: ಪಟ್ಟಣದಲ್ಲಿ ಕರೊನಾ ದಿನಕ್ಕೊಂದು ಮಾಹಿತಿ ಹೊರಗೆಡವುತ್ತಿದ್ದು, ದೇಶದ ಹಾಟ್​ಸ್ಪಾಟ್ ರಾಜ್ಯ ತಮಿಳುನಾಡಿನಿಂದ ಬಂದ 30 ಜನರು ಭಟ್ಕಳದಲ್ಲೇ ಬೀಡುಬಿಟ್ಟಿರುವ ಸಂಗತಿ ತಾಲೂಕಾಡಳಿತಕ್ಕೆ 15 ದಿನಗಳ ಬಳಿಕ ತಿಳಿದಿದ್ದು, ತರಾತುರಿಯಲ್ಲಿ ಅವರ ಪರೀಕ್ಷೆ ನಡೆಸಿದೆ.

ಶನಿವಾರ ವಿಷಯ ತಿಳಿದಿದ್ದು, 30 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಪ್ರತಿದಿನವೂ ಒಂದೊಂದು ಹೊಸ ವಿಷಯ ಬಹಿರಂಗಗೊಳ್ಳುತ್ತಿದ್ದು, ಅದರ ಹಿಂದೆ ಓಡುವುದೇ ಇವರ ಕಲಸವಾಗಿದೆ. ಮಾರ್ಚ್ 2ನೇ ವಾರದಲ್ಲಿ ಭಟ್ಕಳದ ಜಮಾತ್​ಗೆಂದು ತಮಿಳುನಾಡಿನ 30 ಮಂದಿ ಭಟ್ಕಳಕ್ಕೆ ಬಂದಿದ್ದಾರೆ. ನಂತರ ಲಾಕ್​ಡೌನ್ ಘೊಷಣೆಯಾಗಿದ್ದು, ಅಲ್ಲಿಗೆ ತೆರಳಲಾಗದೆ ಅವರು ಪಟ್ಟಣದಲ್ಲೇ ಉಳಿದಿದ್ದಾರೆ.

ಭಟ್ಕಳದಲ್ಲಿ 8 ಪ್ರಕರಣಗಳು ಬೆಳಕಿಗೆ ಬಂದ ನಂತರ ಆಶಾ ಕಾರ್ಯಕರ್ತೆಯರ ತಂಡ ಎಲ್ಲೆಡೆ ಶೋಧ ನಡೆಸಿದೆ. ಆದರೂ ವಿಷಯ ಬಹಿರಂಗಗೊಂಡಿಲ್ಲ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ಬಂದ ಜಮಾತಿಗಳು ಭಟ್ಕಳದಲ್ಲೇ ಇದ್ದಾರೆ ಎಂಬ ಮಾತುಗಳು ಕೇಳಲಾರಂಭಿಸಿವೆ.

ತರಾತುರಿಯಲ್ಲೆ ಪರೀಕ್ಷೆ: ಭಟ್ಕಳದ ಅಜಾದ ನಗರದಲ್ಲಿ 30 ಜನರು ಇರುವ ವಿಷಯ ತಾಲೂಕಾಡಳಿತದ ಗಮನಕ್ಕೆ ಬರುತ್ತಿದ್ದಂತೆ ಪ್ರೋಟೋಕಾಲ್ ಪ್ರಕಾರ ಅವರ ಪರೀಕ್ಷೆ ನಡೆಸಲಾಗಿದೆ. ಅವರ ಕೈಗೆ ಸೀಲ್ ಹೊಡೆದು ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ. ಆದರೂ ಅವರು ಮನೆಯಿಂದ ಹೊರಬಂದು ಭಯ ಸೃಷ್ಟಿಸುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದು, ಅವರಿಗೆ ಅಂಜುಮನ್ ಹಾಸ್ಟೆಲ್​ನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ತಾಲೂಕಾಡಳಿತದ ಪ್ರಕಾರ ಅವರಲ್ಲಿ ರೋಗದ ಯಾವ ಲಕ್ಷಣವೂ ಕಂಡು ಬಂದಿಲ್ಲ. ಎಲ್ಲರೂ ಸ್ವಸ್ಥರಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ.

ತಮಿಳುನಾಡಿನಿಂದ ಬಂದ ಎಲ್ಲರ ಪರೀಕ್ಷೆ ನಡೆಸಲಾಗಿದೆ. ತಾಲೂಕಾಡಳಿತ ಅವರ ಚಲನವಲನಗಳಲ್ಲಿ ಗಮನವಿಟ್ಟಿದೆ. ಸಾಮಾಜಿಕ ಜಾಲತಾಣದ ವದಂತಿಗಳನ್ನು ನಂಬಬೇಡಿ. ಇತರೆಡೆಯಿಂದ ಬಂದ ಜನರ ಮೇಲೂ ಆಡಳಿತ ನಿಗಾ ಇಟ್ಟಿದ್ದು, ಗೌಪ್ಯತೆಯ ದೃಷ್ಟಿಯಿಂದ ಆ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಲಾಗುವುದಿಲ್ಲ. ಜನರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನರು ನಿಶ್ಚಿಂತೆಯಿಂದ ಇರಬೇಕು.| ಭರತ್ ಸೆಲ್ವಂ ಉಪವಿಭಾಗಾಧಿಕಾರಿ ಭಟ್ಕಳ ಉಪವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net