

ಯಲ್ಲಾಪುರ: ಭಟ್ಕಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮತ್ತೆ ಸೀಲ್ಡೌನ್ ಮಾಡುವ ಇಚ್ಛೆ ನಮಗಿಲ್ಲ. ಆದರೆ, ಜನ ಮುಂಜಾಗ್ರತೆ ಕೈಗೊಳ್ಳದಿದ್ದರೆ ಹಾಗೂ ಮತ್ತಷ್ಟು ಪ್ರಕರಣಗಳು ಹೆಚ್ಚಾದರೆ ಸೀಲ್ಡೌನ್ನಂಥ ನಿರ್ಣಯ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಕ್ಕೆ ವೈರಸ್ ಹರಡದಂತೆ ತಡೆಯಲು ಎಲ್ಲರ ಸಹಕಾರ ಅಗತ್ಯ. ಕರೊನಾ ವಿರುದ್ಧ ಹೋರಾಡಲು ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 300 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆಯಿದೆ. ಜತೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 922 ಹಾಸಿಗೆಗಳು ಸಿದ್ಧವಾಗಿವೆ. ಸದ್ಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುವುದು. ಕಳೆದ ಜೂ.1 ರಿಂದ ಮಾದರಿ ಪರೀಕ್ಷೆ ನಡೆಸುವ ಲ್ಯಾಬ್ ಸಹ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, 24 ಗಂಟೆಗಳಲ್ಲಿ ವರದಿ ಸಿಗುತ್ತಿದೆ. ಅದನ್ನು ಮತ್ತಷ್ಟು ಉನ್ನತೀಕರಿಸಿ 6 ಗಂಟೆಯೊಳಗೆ ವರದಿ ಬರುವ ಹಂತಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಉಮೇಶ ಭಾಗ್ವತ, ನಾಗಭೂಷಣ ಹಾವಣಗಿ, ಜಿ. ಎನ್. ಗಾಂವ್ಕಾರ, ವಿಜಯ ಮಿರಾಶಿ, ಪ್ರೇಮಾನಂದ ನಾಯ್ಕ, ಶಿರೀಷ ಪ್ರಭು, ಸತೀಶ ನಾಯ್ಕ ಇತರರಿದ್ದರು.